ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಡಾಳ್ ಗ್ರಾಮದಲ್ಲಿ ತೀವ್ರವಾಗಿದ್ದ ಕುಡಿಯುವ ನೀರಿನ ಸಮಸ್ಯೆಗೆ ಈಗ ಮುಕ್ತಿ ಸಿಕ್ಕಿದೆ. ಶಾಸಕ ಕೆ.ಎಸ್.ಬಸವಂತಪ್ಪ ಅವರ ವಿಶೇಷ ಕಾಳಜಿಯಿಂದಾಗಿ ಮಂಗಳವಾರ ಗ್ರಾಮದಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸಿದ್ದು, ಉತ್ತಮ ಪ್ರಮಾಣದ ನೀರು ಲಭ್ಯವಾಗಿದೆ.

- ಗ್ರಾಪಂ ಎದುರು ಕೊರೆದ ಬೋರ್‌ವೆಲ್‌ನಲ್ಲಿ 2 ಇಂಚಿನಷ್ಟು ನೀರು: ಗ್ರಾಮಸ್ಥರು ಖುಷ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಡಾಳ್ ಗ್ರಾಮದಲ್ಲಿ ತೀವ್ರವಾಗಿದ್ದ ಕುಡಿಯುವ ನೀರಿನ ಸಮಸ್ಯೆಗೆ ಈಗ ಮುಕ್ತಿ ಸಿಕ್ಕಿದೆ. ಶಾಸಕ ಕೆ.ಎಸ್.ಬಸವಂತಪ್ಪ ಅವರ ವಿಶೇಷ ಕಾಳಜಿಯಿಂದಾಗಿ ಮಂಗಳವಾರ ಗ್ರಾಮದಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸಿದ್ದು, ಉತ್ತಮ ಪ್ರಮಾಣದ ನೀರು ಲಭ್ಯವಾಗಿದೆ.

ಗ್ರಾಮದ ನೀರಿನ ಸಮಸ್ಯೆಯನ್ನು ಅರಿತ ಶಾಸಕ ಕೆ.ಎಸ್.ಬಸವಂತಪ್ಪ ಅವರು ಸ್ವತಃ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಬಳಿಕ ಜಲಮೂಲದ ಸೂಕ್ತ ಪಾಯಿಂಟ್ ಗುರುತಿಸಲಾಗಿತ್ತು. ಈಗ ಬೋರ್‌ವೆಲ್ ಕೊರೆಸಲಾಗಿದ್ದು, 2 ಇಂಚು ನೀರು ಲಭ್ಯವಾದ ಹಿನ್ನೆಲೆ ಗ್ರಾಮದ ಜನರಿಗೆ ನೀರಿನ ಸಮಸ್ಯೆ ನೀಗಿದಂತಾಗಿದೆ.

ಶಾಸಕ ಕೆ.ಎಸ್.ಬಸವಂತಪ್ಪ ಅವರು ಕೇವಲ ಗುಡಾಳ್ ಗ್ರಾಮ ಮಾತ್ರವಲ್ಲದೇ, ಸುತ್ತಮುತ್ತಲಿನ ಕದರಪ್ಪನಹಟ್ಟಿ, ಗುಡಾಳ್ ಗೊಲ್ಲರಹಟ್ಟಿ ಹಾಗೂ ಕೆಂಚಮ್ಮನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಿಗೂ ಭೇಟಿ ನೀಡಿದರು. ಈ ಸಂದರ್ಭ ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಿದರು. ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ತಕ್ಷಣವೇ ಬೋರ್‌ವೆಲ್ ಕೊರೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಳದಿಂದ ಕ್ಷೇತ್ರದ ವ್ಯಾಪ್ತಿಯ ಸಾಕಷ್ಟು ಗ್ರಾಮಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಕ್ಷೇತ್ರದ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ತಕ್ಷಣವೇ ಸೂಕ್ತ ಜಾಗದಲ್ಲಿ ಬೋರ್‌ವೆಲ್ ಕೊರೆಸಿ ಕುಡಿಯುವ ನೀರು ಪೂರೈಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಲದೆ, ಖಾಸಗಿ ಕೊಳವೆಬಾವಿಗಳಿಂದಲೂ ನೀರು ಪಡೆದು ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕು. ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಅನುಕೂಲ ಆಗುವಂತೆ ಎಲ್ಲಾ ಗ್ರಾಮಗಳಲ್ಲಿ 4 ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ಸೂಚಿಸಿದರು.

ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಅವರ ಕಾರ್ಯವೈಖರಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಅಣಜಿ ಚಂದ್ರಣ್ಣ, ಗ್ರಾಮದ ಮುಖಂಡರಾದ ಕಲ್ಲೇಶ್, ಶಿವಣ್ಣ, ಈಶ್ವರ್, ವೆಂಕಟೇಶ್, ಕರಿಯಪ್ಪ, ಪ್ರಕಾಶ್, ಪಿಡಿಒ ಸುರೇಶ್, ಗ್ರಾಪಂ ಆಡಳಿತಾಧಿಕಾರಿ ಮಲ್ಲೇಶ್ ನಾಯ್ಕ್, ಎಂಜಿನಿಯರ್ ಆಸ್ಮಾ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

- - -

(ಕೋಟ್‌) ಬೇಸಿಗೆ ತೀವ್ರವಾಗುತ್ತಿರುವ ಹಿನ್ನೆಲೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದೆ.

- ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ.

- - -

-5ಕೆಡಿವಿಜಿ32, 33:

ದಾವಣಗೆರೆ ತಾಲೂಕಿನ ಗುಡಾಳ್ ಗ್ರಾಮದಲ್ಲಿ ಗ್ರಾಪಂ ಕಚೇರಿ ಮುಂಭಾಗದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಸಮ್ಮುಖ ಬೋರ್‌ವೆಲ್ ಕೊರೆಸಲಾಯಿತು.