ಡಿ.10ರಂದು ಸುವರ್ಣಸೌಧಕ್ಕೆ ಪಂಚಮಸಾಲಿ ಮುತ್ತಿಗೆ

| Published : Nov 28 2024, 12:31 AM IST

ಸಾರಾಂಶ

ದಾವಣಗೆರೆಯಲ್ಲಿ ಕೂಡಲಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಹರಿಹರ ಮಾಜಿ ಶಾಸಕ, ಪಂಚಮಸಾಲಿ ನಾಯಕ ಎಚ್.ಎಸ್.ಶಿವಶಂಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಬೆಳಗ್ಗೆ 10ಕ್ಕೆ ಬೆಳಗಾವಿ ಸುವರ್ಣಸೌಧಕ್ಕೆ ನೂರಾರು ಟ್ರ್ಯಾಕ್ಟರ್‌ಗಳ ಸಮೇತ ಮುತ್ತಿಗೆ ಹಾಕುವುದಾಗಿ ಕೂಡಲ ಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ. ನಗರದ ಪಿಜೆ ಬಡಾವಣೆಯಲ್ಲಿ ಮಾಜಿ ಶಾಸಕ ಎಚ್.ಎಸ್.ಶಿವಶಂಕರ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕಲ್ಪಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಸುವರ್ಣ ಸೌಧಕ್ಕೆ ಶಾಂತಿಯುತವಾಗಿ ಮುತ್ತಿಗೆ ಹಾಕಲಾಗುವುದು ಎಂದರು. ನಾಲ್ಕು ವರ್ಷದಿಂದಲೂ 2 ಎ ಮೀಸಲಾತಿಗೆ ವಿವಿಧ ಹಂತದ ಹೋರಾಟ ನಡೆಸಿದ್ದೇವೆ. ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸಿಗಬೇಕು. ಅದಕ್ಕಾಗಿ ಪಂಚಮಸಾಲಿ ಸಮಾಜವನ್ನು 2 ಎ ಮೀಸಲಾತಿಗೆ ಪ್ರಾಮಾಣಿಕ ಹೋರಾಟ ನಡೆಸುತ್ತಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರ ಕಡೇ ಘಳಿಗೆಯಲ್ಲಿ ನಿರ್ಧಾರ ಕೈಗೊಂಡಿತ್ತಾದರೂ, ಮೀಸಲಾತಿ ಪ್ರಸ್ತಾಪದ ವಿಚಾರವೂ ಇಲ್ಲಿಗೆ ನಿಂತಿತು ಎಂದು ಬೇಸರ ಹೊರಹಾಕಿದರು.

ಬಹುಸಂಖ್ಯಾತ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲಿಸಬಾರದು. ನಮ್ಮ ಹೋರಾಟವನ್ನು ಗಟ್ಟಿಗೊಳಿಸಲು ನಿರಂತರ ಧ್ವನಿ ಎತ್ತಿ, ಬೀದಿಗಿಳಿದು ಹೋರಾಡುತ್ತಿದ್ದೇವೆ. ಆದರೆ, ನಮ್ಮ ಸಮುದಾಯದ ಬೇಡಿಕೆಗೆ ಸ್ಪಂದಿಸಬೇಕಾದ ಸರ್ಕಾರವೂ ಹೋರಾಟಕ್ಕೆ ಮನ್ನಣೆ ನೀಡುತ್ತಿಲ್ಲ. ಮೀಸಲಾತಿ ವಿಚಾರವಾಗಿ ಸಭೆ ಕರೆಯುವ ಭರವಸೆ ನೀಡಿದ್ದ ಸಿಎಂ ಇದುವರೆಗೂ ಸಭೆ ಕರೆದಿಲ್ಲ ಎಂದು ದೂರಿದರು.

ಸಿಎಂ ಸಭೆ ಕರೆಯಲಿಲ್ಲ, ಮೀಸಲಾತಿ ಕೊಡುವ ಬಗ್ಗೆ ಯಾವುದೇ ಸಕಾರಾತ್ಮಕ ಸ್ಪಂದನೆ ನೀಡುತ್ತಿಲ್ಲ. ನಮ್ಮ ಕೂಗು ಸರ್ಕಾರಕ್ಕೆ ಮುಟ್ಟುವವರೆಗೂ ಈ ಸಲ ಹೋರಾಟ ನಡೆಸಲಿದ್ದೇವೆ. ಈಗಾಗಲೇ ಹೆದ್ದಾರಿಗಳನ್ನು ತಡೆದು, ಹೆದ್ದಾರಿಯಲ್ಲೇ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರೂ ಸ್ಪಂದಿಸಿಲ್ಲ. ಸಮಾಜದ ಶಾಸಕರೆ ಅಧಿವೇಶನದಲ್ಲಿ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.

ನಮ್ಮ ಮೀಸಲಾತಿ ಹೋರಾಟವಂತೂ ನಿಂತಿಲ್ಲ. ನಮ್ಮ ಬೇಡಿಕೆ ಈಡೇರಿಸುವಂತೆ ಕಾನೂನು ಹೋರಾಟಕ್ಕೆ ಮುಂದಾದ ವೇಳೆ ಸಿಎಂ 2 ಗಂಟೆ ಸಭೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಉಪ ಚುನಾವಣೆಗಳ ನೆಪ ಮಾಡಿಕೊಂಡು, ಯಾವುದೇ ನಿರ್ಣಯ ಸಿಎಂ ಕೈಗೊಳ್ಳಲಿಲ್ಲ. ಈಗ ಚುನಾವಣೆ ಫಲಿತಾಂಶವೂ ಬಂದಿದೆ. ಇನ್ನಾದರೂ ಮೀಸಲಾತಿ ಘೋಷಿಸುವ ಕೆಲಸ ಮಾಡಲಿ ಎಂದು ಸರ್ಕಾರಕ್ಕೆ ತಾಕೀತು ಮಾಡಿದರು.

ನಮಗೆ ಮೀಸಲಾತಿಯ ಕೂಲಿ ಕೊಡಿ, ಅನುದಾನ ಬೇಡ, ಅಧಿಕಾರ ಬೇಡ. ನಮ್ಮ ಸಮಾಜದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ, ಯುವಜನರಿಗೆ ಉದ್ಯೋಗಕ್ಕಾಗಿ ನಾವು ಮೀಸಲಾತಿ ಕೂಲಿ ಕೇಳುತ್ತಿದ್ದೇವೆ. ಪಂಚಮಸಾಲಿ ಜೊತೆಗೆ ಲಿಂಗಾಯತದ ಎಲ್ಲಾ ಉಪ ಸಮುದಾಯಗಳಿಗೂ ಮೀಸಲಾತಿ ಕೇಳಿದ್ದೇವೆ. ಈ ಹಿನ್ನೆಲೆಯಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಿದ್ದು, ಪಕ್ಷಾತೀತವಾಗಿ ಎಲ್ಲರೂ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಯುವ ಮುಖಂಡ ಬಿ.ಜಿ.ಅಜಯಕುಮಾರ, ಕಾರಿಗನೂರು ಕಲ್ಲೇಶಪ್ಪ, ಚನ್ನಬಸವನಗೌಡ್ರು, ಮಯೂರ, ಆನಂದ ಜಿರ್ಲೆ, ಬಿ.ಜಿ.ಭರತ್‌, ಕೊಟ್ರೇಶ, ಚಂದ್ರು, ಮಹೇಶ ಇದ್ದರು. 2 ಎ ಹೋರಾಟಕ್ಕೆ ಸ್ವಯಂ ಪ್ರೇರಣೆಯಿಂದ ಬರಲು ಕರೆಶಿಕ್ಷಣ, ಉದ್ಯೋಗಕ್ಕಾಗಿ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿ ಹೋರಾಟ ಸಮಿತಿ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಜಿಲ್ಲೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸುವಂತೆ ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.

ಪಂಚಮಸಾಲಿ ಹೋರಾಟದ ನಿರ್ಣಾಯಕ ಸ್ಥಳ ದಾವಣಗೆರೆಯಾಗಿದೆ. ಇಲ್ಲಿ ನಮ್ಮ ಹೋರಾಟಗಳೂ ಯಶಸ್ವಿಯಾಗಿದೆ. ಹಾಗಾಗಿ ಇಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಹೋರಾಟಕ್ಕೆ ಬರಬೇಕು ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾಗಿದೆ. ಇನ್ನು ವಿಳಂಬ ಮಾಡದೇ, ಮೀಸಲಾತಿ ನೀಡಲಿ. ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಾಣಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಲಿಂಗಾಯತ ಸಮಾಜವೂ ಕಾರಣವೆಂಬುದನ್ನು ಸಿಎಂ ಸಿದ್ದರಾಮಯ್ಯ ಮರೆಯಬಾರದು ಎಂದರು.

ಹರಿಹರ ಮಾಜಿ ಶಾಸಕ, ಸಮಾಜದ ಹಿರಿಯ ಮುಖಂಡ ಎಚ್.ಎಸ್.ಶಿವಶಂಕರ ಮಾತನಾಡಿ, ಪಂಚಮಸಾಲಿ ಹೋರಾಟ ಕವಲು ದಾರಿಯಲ್ಲಿಲ್ಲ. ನಮ್ಮ ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಯಾರೂ ಮಾಡಬಾರದು. ನಮ್ಮ ನಾಯಕರು ಸರ್ಕಾರ ಬಡಿದೆಬ್ಬಿಸುವ ಕೆಲಸ ಮಾಡಬೇಕು. ಸಮಾಜದ ಒಳಿತಿಗೆ ಎಲ್ಲರೂ ಒಗ್ಗೂಡಬೇಕು ಎಂದರು.