ಸಾರಾಂಶ
ಲಕ್ಷ್ಮೇಶ್ವರ: ಕೃಷಿ ಕಾಯಕದಲ್ಲಿ ನಿರತವಾದ ಮುಗ್ಧ ಹಾಗೂ ಸಕಲಜೀವಿಗಳಿಗೆ ಅನ್ನ ನೀಡುವ ರೈತ ಸಮುದಾಯ ಪಂಚಮಸಾಲಿಗಳು ತಮ್ಮ ನ್ಯಾಯಬದ್ಧ ೨ಎ ಮೀಸಲಾತಿ ಕೇಳಲಿಕ್ಕೆ ಬಂದವರ ಮೇಲೆ ಪೋಲಿಸರನ್ನು ಛೂ ಬಿಟ್ಟು ದೌರ್ಜನ್ಯ ನಡೆಸಿ ಸಮಾಜವನ್ನು ಕೆರಳಿಸಿದ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಪಂಚಮಸಾಲಿಗಳು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಲಕ್ಷ್ಮೇಶ್ವರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ ಹೇಳಿದರು.
ಅವರು ಬೆಳಗಾವಿಯಲ್ಲಿ ಪಂಚಮಸಾಲಿಗಳ ಮೇಲೆ ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವಂತೆ ರಾಜ್ಯ ಸಂಘ ಕರೆ ನೀಡಿರುವ ಹಿನ್ನೆಲೆ ಗುರುವಾರ ಪಂಚಮಸಾಲಿ ಸಮಾಜದವರು ಲಕ್ಷ್ಮೇಶ್ವರದಲ್ಲಿ ಕೈಗಾ-ಇಳಕಲ್ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜದವರು ತಮ್ಮ ನ್ಯಾಯಯುತವಾದ ೨ಎ ಮೀಸಲಾತಿಗಾಗಿ ಆಗ್ರಹಿಸಿ ಬೆಳಗಾವಿ ಸುವರ್ಣಸೌಧದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಬಂದಾಗ ಹೋರಾಟ ಹತ್ತಿಕ್ಕುವ ನಿಟ್ಟಿನಲ್ಲಿ ಪೊಲೀಸರ ಮೂಲಕ ಲಾಠಿ ಚಾರ್ಜ್ ಮಾಡಿಸಿ ಹಲ್ಲೆಗೊಳಪಡಿಸಿ ಓಡಿಸಿದ ಕುಚ್ಯೋದ್ಯ ಕ್ರಮ ಖಂಡನೀಯ. ದುರುದ್ದೇಶ ಪೂರ್ವಕವಾಗಿ ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿಸಿರುವುದು ಪ್ರಜಾಪ್ರಭುತ್ವದ ಕಗ್ಗೋಲೆಯಾಗಿದೆ.ಸಮಾಜದ ಹಲವು ವರ್ಷಗಳ ನ್ಯಾಯಯುತ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಸಮಾಜ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ತೀವೃಸ್ವರೂಪದ ಹೋರಾಟಕ್ಕಿಳಿಯಬೇಕಾಗುತ್ತದೆ. ಆಗುವ ಎಲ್ಲ ಸಮಸ್ಯೆಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಪಂ ಮಾಜಿ ಅಧ್ಯಕ್ಷ ಎಸ್.ಪಿ ಬಳಿಗಾರ ಮಾತನಾಡಿ, ೩ ದಶಕಗಳಿಂದ ಸಮಾಜದ ನ್ಯಾಯಯುತ ಹಕ್ಕೊತ್ತಾಯ, ಬೇಡಿಕೆ ಮೀಸಲಾತಿಗಾಗಿ ನ್ಯಾಯ ಕೇಳಲು ಬಂದಾಗ ಲಾಠಿಚಾರ್ಜ್ ಮಾಡಿರುವ ಕ್ರಮ ಪಕ್ಷಾತೀತವಾಗಿ ಖಂಡಿಸುತ್ತೇವೆ ಎಂದರು.ಜಿಪಂ ಮಾಜಿ ಸದಸ್ಯ ಎಂ.ಎಸ್.ದೊಡ್ಡಗೌಡರ ಮಾತನಾಡಿ, ಪ್ರತಿಭಟನೆ ಸಂದರ್ಭದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಿ, ಅಮಾಯಕರ ಮೇಲಿನ ಕೇಸ್ ವಾಪಸ್ ಪಡೆದು ಸೂಕ್ತ ಚಿಕಿತ್ಸೆ ಹಾಗೂ ಪರಿಹಾರ ಒದಗಿಸಲಿ. ಪೋಲಿಸ್ ಎಡಿಜಿಪಿ ಮತ್ತು ಕೆಲ ದರ್ಪ ತೋರಿಸಿದ ಅಧಿಕಾರಿಗಳನ್ನು ಅಮಾನತ್ ಗೊಳಿಸಬೇಕು ಮತ್ತು ನಡೆದಿರುವ ಘಟನೆಯ ಬಗ್ಗೆ ಸರ್ಕಾರ ಕ್ಷಮೆಯಾಚಿಸಲಿ ಎಂದರು.
ಈ ವೇಳೆ ಪಂಚಮಸಾಲಿ ಸಮಾಜದ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಮಾಲಾದೇವಿ ದಂದರಗಿ, ಸೋಮಣ್ಣ ಡಾಣಗಲ್, ಶಿವಾನಂದ ದೇಸಾಯಿ, ಎಂ.ಆರ್. ಪಾಟೀಲ, ವಿಜಯಕುಮಾರ ಮಹಾಂತಶೆಟ್ಟರ್, ವಾಲ್ಮೀಕಿ ಸಮಾಜದ ಮುಖಂಡ ನಿಂಬಣ್ಣ ಮಡಿವಾಳರ ಮಾತನಾಡಿದರು. ಸಿದ್ದನಗೌಡ ಬಳ್ಳೊಳ್ಳಿ, ಶಂಕರ ಬ್ಯಾಡಗಿ, ಫಕ್ಕೀರೇಶ ಕವಲೂರ, ಶೈಲಾ ಆದಿ, ಮಹಾದೇವಪ್ಪ ಅಣ್ಣಿಗೇರಿ, ಬಸವರಾಜ ಹೊಗೆಸೊಪ್ಪಿನ, ಚಂದ್ರು ಮಾಗಡಿ, ಪ್ರಕಾಶ ಮಾದನೂರ, ಯಲ್ಲಪ್ಪ ಶಿರಬಡಗಿ, ಫಕ್ಕೀರೇಶ ಅಣ್ಣಿಗೇರಿ, ಪ್ರಕಾಶ ಕಮಡೊಳ್ಳಿ, ಮಂಜುನಾಥ ಗೌರಿ, ಶಿವಾನಂದ ಬನ್ನಿಮಟ್ಟಿ, ಜಂಜನಗೌಡ ನರಸಮ್ಮನವರ, ಬಸವಣೆಪ್ಪ ಮತ್ತೂರ,ಸುನೀಲ್ ಹಂಗನಕಟ್ಟಿ, ಮಂಜುನಾಥಗೌಡ ಕರೀಗೌಡ್ರ, ಚಂದ್ರಗೌಡ ಪಾಟೀಲ, ಮಂಜುನಾಥ ಕಣವಿ, ರಾಜು ಲಿಂಬಿಕಾಯಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಪಂಚಮಸಾಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.ಪಟ್ಟಣದ ಸೋಮೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ ಹಾವಳಿ ಆಂಜನೇಯ ದೇವಸ್ಥಾನ, ಪಾದಗಟ್ಟಿ,ಶಿಗ್ಲಿ ನಾಕಾದ ಮೂಲಕ ಹೊಸ ಬಸ್ ನಿಲ್ದಾಣದ ಹತ್ತಿರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಕೆಲ ಹೊತ್ತು ರಸ್ತೆ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು, ಸಾರ್ವಜನಿಕರು ಪರದಾಡುವಂತಾಯಿತು. ಪಿಎಸ್‌ಐ ನಾಗರಾಜ ಗಡಾದ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೂಬಸ್ತ್ ನಿರ್ವಹಿಸಲಾಗಿತ್ತು.