ನಮ್ಮ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಾವು ಆಚರಿಸುವ ಹಬ್ಬಗಳು ಯುವ ಪೀಳಿಗೆಗೆ ಪ್ರೇರಣೆ ನೀಡುವಂತಾಗಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಮಂಗಳೂರು: ನಮ್ಮ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಾವು ಆಚರಿಸುವ ಹಬ್ಬಗಳು ಯುವ ಪೀಳಿಗೆಗೆ ಪ್ರೇರಣೆ ನೀಡುವಂತಾಗಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕದ್ರಿ ಕಂಬಳದ ಮಲ್ಲಿಕಾ ಬಡಾವಣೆಯಲ್ಲಿರುವ ಮಂಜು ಪ್ರಾಸಾದ ನಿಲಯದ ವಾದಿರಾಜ ಮಂಠಪದ ವಿಶ್ವೇಶತೀರ್ಥ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ‘ಬಿಸು ಕಿಣಿ - ಪಂಚಾಂಗ ಶ್ರವಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಯಾಯ ಪ್ರದೇಶಗಳ ಪ್ರಾಕೃತಿಕ ಸಂಪನ್ಮೂಲಗಳಿಗೆ ಅನುಗುಣವಾಗಿ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ತುಳುನಾಡಿನ ಸಂಸ್ಕೃತಿಗೆ ಅನುಗುಣವಾಗಿ ಬಿಸು ಹಬ್ಬವನ್ನು ಇಲ್ಲಿ ಪ್ರಾಕೃತಿಕವಾಗಿ ದೊರೆಯುವ ಹೂ, ಹಣ್ಣು ಹಂಪಲು, ತರಕಾರಿಗಳನ್ನು ಕ್ರೋಢೀಕರಿಸಿ ಪ್ರಕೃತಿ ಪೂಜೆಯನ್ನು ಮಾಡಲಾಗುತ್ತದೆ. ಕೃಷಿ ಸಂಸ್ಕೃತಿಯ ಈ ಸದ್ವಿಚಾರವನ್ನು ಯುವ ಪೀಳಿಗೆಗೆ ತಿಳಿ ಹೇಳುವುದು ಹಿರಿಯರ ಕರ್ತವ್ಯವಾಗಿದೆ. ಹೊಸ ಸಂವತ್ಸರವು ಲೋಕಕ್ಕೆ ಮಂಗಳಕರವಾಗಲಿ ಎಂದು ಹಾರೈಸಿದರು.ಕಾರ್ಯಕ್ರಮದ ಅಂಗವಾಗಿ ರುದ್ರ ಪಾರಾಯಣ, ಭಜನೆ ಹಾಗೂ ಪಂಚಾಂಗ ಶ್ರವಣ ಹಮ್ಮಿಕೊಳ್ಳಲಾಗಿತ್ತು. ವೇ.ಮೂ.ಡಾ. ಪ್ರಭಾಕರ ಅಡಿಗ ಅವರ ಮಾರ್ಗದರ್ಶನದಲ್ಲಿ ನಡೆದ ಸಮಾರಂಭದಲ್ಲಿ ವೇ.ಮೂ.ರವಿ ಅಡಿಗ ಅವರು ಪಂಚಾಂಗ ಶ್ರವಣ ನಡೆಸಿದರು.

ಈ ಸಂದರ್ಭದಲ್ಲಿ ಬಹುಶೃತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಹಿರಿಯ ಯಕ್ಷಗಾನ ಪ್ರಸಂಗ ಕರ್ತ ಪೊಳಲಿ ನಿತ್ಯಾನಂದ ಕಾರಂತ, ಚಂದ್ರಶೇಖರ ಮಯ್ಯ, ಪೂರ್ಣಿಮಾ ರಾವ್ ಪೇಜಾವರ, ಶಶಿಪ್ರಭಾ ಐತಾಳ್ ಮತ್ತಿತರರು ಇದ್ದರು.