ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
2025- 26ನೇ ನರೇಗಾ ಕಾಮಗಾರಿಗಳಿಗೆ ಕಾರ್ಯಾದೇಶ ನೀಡದೆ ಹಾಗೂ ಕ್ರಿಯಾ ಯೋಜನೆಯನ್ನು ಗ್ರಾಮ ಪಂಚಾಯಿತಿಗಳಿಗೆ ವಾಪಸ್ ಕಳುಹಿಸಿರುವ ಕ್ರಮ ಖಂಡಿಸಿ ತಾಲೂಕು ಗ್ರಾಮ ಪಂಚಾಯಿತಿಗಳ ಸದಸ್ಯರ ಒಕ್ಕೂಟದ ಪದಾಧಿಕಾರಿಗಳು ಪಟ್ಟಣದಲ್ಲಿ ಅನಿರ್ಧಿಷ್ಟಾವಧಿ ಧರಣಿ ಕೈಗೊಂಡಿದ್ದಾರೆ.ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿ ಬಳಿ ಒಕ್ಕೂಟದ ಪದಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಘಟನೆ ಪದಾಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿಗೆ ರೈತರು ಬೆಂಬಲ ಸೂಚಿಸಿ, ಗ್ರಾಪಂ ಸದಸ್ಯರ ಹಲವು ಬೇಡಿಕೆಗಳನ್ನು ತ್ವರಿತ ಗತಿಯಲ್ಲಿ ಈಡೇರಿಸಬೇಕೆಂದು ಒತ್ತಾಯಿಸಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಿಯಾ ಯೋಜನೆಯನ್ನು ತಾಲೂಕಿನ 42 ಗ್ರಾಪಂಗಳಿಗೆ ರಚಿಸಿ ತಾಪಂಗೆ ಕಳುಹಿಸಿದ್ದರೂ ಕ್ರಿಯಾ ಯೋಜನೆ ಮೊತ್ತ 187 ಕೋಟಿ ರು. ಆಗಿದೆ.ತಾಪಂ ತಂತ್ರಾಂಶದಲ್ಲಿ ಕಳುಹಿಸಿಕೊಟ್ಟಿದ್ದರೂ ಇಒ ಮತ್ತು ಜಿಪಂ ಸಿಇಒ ಯಾವುದೇ ಸರಕಾರದ ಅಧಿಕೃತ ಆದೇಶ ಮತ್ತು ಸುತ್ತೋಲೆಗಳು ಇಲ್ಲದೆ ತಂತ್ರಾಂಶದಲ್ಲಿರುವಂಥ ಕಾಮಗಾರಿಗಳ ಕ್ರಿಯಾ ಯೋಜನೆಗಳನ್ನು ಕಾನೂನು ಬಾಹಿರವಾಗಿ ರದ್ದುಗೊಳಿಸಿ ಮೌಖಿಕವಾಗಿ ಮತ್ತೆ ಗ್ರಾಪಂಗಳಿಗೆ ಕ್ರಿಯಾ ಯೋಜನೆಯನ್ನು ತಯಾರಿಸಲು ತಿಳಿಸಿರುವ ಕ್ರಮ ಖಂಡಿಸಿದರು.
ಪ್ರತಿ ಗ್ರಾಪಂನ ಪಿಡಿಒಗಳು ಯಾವುದೇ ರೀತಿಯ ವಾರ್ಡ್‌ಸಭೆ, ಗ್ರಾಮಸಭೆ ಮತ್ತು ಪಂಚಾಯಿತಿ ಸಭೆಗಳನ್ನು ಆಯೋಜನೆ ಮಾಡದೆ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ತಮಗೆ ಬೇಕಾದಂತೆ ಕಾಮಗಾರಿಗಳನ್ನು ರಚನೆ ಮಾಡಿ 187 ಕೋಟಿ ರು.ಗಳಿದ್ದ ಅನುದಾನವನ್ನು ಕೇವಲ 57 ಕೋಟಿಗೆ ಸೀಮಿತಗೊಳಿಸಿದ್ದಾರೆಂದು ಆರೋಪಿಸಿದರು.130 ಕೋಟಿ ರು. ಮೊತ್ತದ ಕಾಮಗಾರಿಗಳ ಕ್ರಿಯಾಯೋಜನೆಯನ್ನು ಮೊಟಕುಗೊಳಿಸಿ ನರೇಗಾ ಕಾಯಿದೆಗಳನ್ನು ದುರ್ಬಲಗೊಳಿಸಲು ಮುಂದಾಗಿದ್ದಾರೆ. ಪ್ರಸಕ್ತ ಸಾಲಿನ ನರೇಗಾ ಕ್ರಿಯಾ ಯೋಜನೆಯ ಕಾಮಗಾರಿಗಳನ್ನು 60:40 ಸರಾಸರಿಯಲ್ಲಿ ಇರುವ ಪಂಚಾಯಿತಿ ಕಾಮಗಾರಿಗಳನ್ನು ಚಾಲ್ತಿಗೊಳಿಸಬೇಕೆಂದು ಒತ್ತಾಯಿಸಿದರು.
ಕೂಡಲೇ ಮೇಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕಾಗಮಿಸಿ ಗ್ರಾಪಂ ಸದಸ್ಯರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಆಹೋರಾತ್ರಿ ಧರಣಿ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಿದ್ದಾರೆ.ಧರಣಿ ವೇಳೆ ಸಂಘಟನೆ ತಾಲೂಕು ಅಧ್ಯಕ್ಷ ಸತ್ಯಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಕೃಷ್ಣ, ಪದಾಧಿಕಾರಿಗಳಾದ ಎಸ್.ದಯಾನಂದ್, ನಳಿನಿ, ಶಿವಲಿಂಗಯ್ಯ, ರಾಮಕೃಷ್ಣ, ಜಗದೀಶ್, ಮಂಜುನಾಥ್, ಪವಿತ್ರ, ಸುಧಾ, ಕಮಲಮ್ಮ, ಪುಟ್ಟರಾಮು, ರಾಜೇಶ್, ರೈತ ಸಂಘಟನೆಯ ಮುಖಂಡರಾದ ಲಿಂಗಪ್ಪಾಜಿ, ವರದರಾಜು, ರಾಮಕೃಷ್ಣ, ಕೃಷ್ಣೇಗೌಡ, ಕರೀಗೌಡ ನೇತೃತ್ವ ವಹಿಸಿದರು.
------------------ಕ್ರಿಯಾ ಯೋಜನೆ ಬದಲಾವಣೆ: ಪರಿಶೀಲಿಸಿ ವರದಿ ನೀಡುವಂತೆ ಸಚಿವ ಪ್ರಿಯಾಂಕ ಖರ್ಗೆ ಆದೇಶ
ಕನ್ನಡಪ್ರಭ ವಾರ್ತೆ ಮದ್ದೂರುತಾಲೂಕಿನ 42 ಗ್ರಾಮ ಪಂಚಾಯಿತಿಗಳ ವಾರ್ಡ್ ಸಭೆ, ಗ್ರಾಮ ಸಭೆ, ಗ್ರಾಪಂ ಸಭೆಗಳಲ್ಲಿ ಚರ್ಚಿಸಿ, ನಿರ್ಣಯಿಸಿದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕ್ರಿಯಾ ಯೋಜನೆಯನ್ನು ಅಧಿಕಾರಿಗಳು ಬದಲಿಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ ವರದಿ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಡ್ಯ ಜಿಪಂ ಸಿಇಒ ಅವರಿಗೆ ಆದೇಶಿಸಿದ್ದಾರೆ.
ಅಧಿಕಾರಿಗಳ ನಿಲುವನ್ನು ಖಂಡಿಸಿ, ಮದ್ದೂರಿನ ವಿವಿಧ ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಮದ್ದೂರು ಗ್ರಾಪಂ ಸದಸ್ಯರ ಒಕ್ಕೂಟದ ಬ್ಯಾನರ್ ಅಡಿ ಧರಣಿ ನಡೆಸುತ್ತಿದ್ದಾರೆ. ಈ ಬಗ್ಗೆ ಶಾಸಕರಾದ ದಿನೇಶ ಗೂಳಿಗೌಡ, ಕೆ.ಎಂ.ಉದಯ್ ಅವರು ಗ್ರಾಮೀಣಾಭಿವೃದ್ಧಿ ಸಚಿವರನ್ನು ಭೇಟಿಯಾಗಿ ವಿಷಯ ತಿಳಿಸಿ ಮನವಿ ಪತ್ರ ಸಲ್ಲಿಸಿದರು. ಮದ್ದೂರು ಗ್ರಾಪಂ ಸದಸ್ಯರ ಒಕ್ಕೂಟದ ಮನವಿ ಪರಿಗಣಿಸಬೇಕು ಎಂದು ವಿನಂತಿಸಿದರು.ಅಲ್ಲದೆ, ಈ ವರ್ಷದ ನರೇಗಾ ಕ್ರಿಯಾ ಯೋಜನೆಯ ಕಾಮಗಾರಿಗಳನ್ನು 60:40 ಸರಾಸರಿಯಲ್ಲಿ ಇರುವ ಪಂಚಾಯಿತಿಗಳ ಕಾಮಗಾರಿಗಳನ್ನು ಚಾಲ್ತಿಗೊಳಿಸಬೇಕು. (ಆನ್ ಗೋಯಿಂಗ್) ಎಂದು ಮನವಿ ಮಾಡಿದರು. ತಕ್ಷಣ ಸ್ಪಂದಿಸಿದ ಸಚಿವರು ಈ ಬಗ್ಗೆ ಪರಿಶೀಲನೆಗೆ ಆದೇಶ ಮಾಡಿದ್ದಾರೆ.
ತಾಲೂಕಿನ ಒಟ್ಟಾರೆ ಎನ್‌ಆರ್‌ಇಜಿಎ ಕ್ರಿಯಾ ಯೋಜನೆಯ 187 ಕೋಟಿ ಅನ್ನು ಬಿಟ್ಟು 57 ಕೋಟಿಗೆ ಸೀಮಿತಗೊಳಿಸಿದ್ದಾರೆ. ಸುಮಾರು 130 ಕೋಟಿ ಮೊತ್ತದ ಕಾಮಗಾರಿಗಳ ಕ್ರಿಯಾಯೋಜನೆಯನ್ನು ಕೈಬಿಟ್ಟು ಗ್ರಾಮಸ್ಥರಿಗೆ ತೊಂದರೆ ಉಂಟಾಗಿದೆ ಎಂದು ಶಾಸಕರು ಮನವಿಯಲ್ಲಿ ತಿಳಿಸಿದ್ದಾರೆ.