ಸಾರಾಂಶ
ಹಾನಗಲ್ಲ: ತಾಲೂಕಿನಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿರುವ ಪಂಚಮಸಾಲಿ ಸಮುದಾಯ ರಾಜಕೀಯ ಸದವಕಾಶಗಳಿಂದ ವಂಚಿತವಾಗುತ್ತಿರುವುದು ಇಡೀ ಸಮುದಾಯವನ್ನು ಕಾಡುತ್ತಿದೆ ಎಂದು ತಾಲೂಕು ಪಂಚಮಸಾಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸೋಮಶೇಖರ ಕೋತಂಬರಿ ಖೇದ ವ್ಯಕ್ತಪಡಿಸಿದರು.ಹಾನಗಲ್ಲಿನ ಪುರಸಭೆಯಲ್ಲಿ ಪುರಸಭೆಯ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ವೀಣಾ ಗುಡಿ ಅವರನ್ನು ಸಮಾಜದಿಂದ ಸನ್ಮಾನಿಸಿ ಮಾತನಾಡಿದ ಅವರು, ಎಲ್ಲ ಕಾಲಗಳಲ್ಲಿಯೂ ಅಸಂಘಟಿತವಾಗಿರುವ ಪಂಚಮಸಾಲಿ ಸಮುದಾಯ ಒಂದಿಲ್ಲೊಂದು ನೆಪದಲ್ಲಿ ರಾಜಕೀಯ ಅಧಿಕಾರಗಳಿಂದ ವಂಚಿತವಾಗುತ್ತಲೇ ಬಂದಿದೆ. ನಮ್ಮ ಸೇವೆ ಸಮಾಜಕ್ಕೆ ನಿಷ್ಕಳಂಕಿತವಾಗಿ ಸಲ್ಲುತ್ತಿದ್ದರೂ ಕೂಡ ಅಧಿಕಾರದ ಪ್ರಶ್ನೆ ಬಂದಾಗ ಮಾತ್ರ ನಾವು ವಂಚನೆಗೊಳಗಾಗುತ್ತಿರುವುದು ವಿಷಾದದ ಸಂಗತಿ. ಈಗ ಉತ್ತಮ ಸಂಘಟನೆಯೊಂದಿಗೆ ಗಟ್ಟಿಯಾಗಿರುವ ನಾವು ಎಲ್ಲವನ್ನೂ ಎದುರಿಸಿ ನಮ್ಮ ಸ್ಥಾನ ಗಿಟ್ಟಿಸಿಕೊಳ್ಳುತ್ತೇವೆ ಎಂಬ ಭರವಸೆ ಮೂಡಿದೆ. ಎಂಥ ಸವಾಲುಗಳನ್ನೂ ಎದುರಿಸಿ ಗೆಲ್ಲುವ ಶಕ್ತಿ ನಮಗೆ ಬಂದಿದೆ. ವೀಣಾ ಗುಡಿ ಅವರು ತಮಗೆ ಪುರಸಭೆಯಲ್ಲಿ ದೊರೆತ ಅವಕಾಶವನ್ನು ಬಳಸಿಕೊಂಡು ಬಡವರ ಹಿತಕ್ಕೆ ಪರಿಶ್ರಮಿಸುವಂತಾಗಲಿ ಎಂದರು.ಪಂಚಮಸಾಲಿ ಹಾನಗಲ್ಲ ನಗರ ಘಟಕದ ಅಧ್ಯಕ್ಷ ಪ್ರೊ.ಸಿ. ಮಾಂಜುನಾಥ ಮಾತನಾಡಿ, ಧ್ವನಿ ಇಲ್ಲದವರಿಗೆ ಧ್ವನಿಯಾದ ಪಂಚಮಸಾಲಿ ಸಮುದಾಯ ಸದಾ ಸಾಮಾಜಿಕ ಸೇವೆಯಲ್ಲಿ ಹೆಸರು ಮಾಡಿದೆ. ಈಗ ವೀಣಾ ಗುಡಿ ಅವರಿಗೆ ಪುರಸಭೆ ಉಪಾಧ್ಯಕ್ಷರಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದ್ದು ಅದು ನೊಂದು ಬೆಂದವರ, ದುರ್ಬಲರ ಸೇವೆಗೆ ಮೀಸಲಾಗಿರಲಿ ಎಂದರು.ಪುರಸಭೆ ಅಧ್ಯಕ್ಷೆ ವೀಣಾ ಗುಡಿ ಮಾತನಾಡಿ, ಪುರಸಭೆ ಎಲ್ಲ ಸದಸ್ಯರು, ಶಾಸಕರು ಒಮ್ಮತದಿಂದ ನೀಡಿರುವ ಅಧಿಕಾರವನ್ನು ಹಾನಗಲ್ಲ ನಗರದ ಸೇವೆಗೆ ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ಸಾರ್ಥಕಪಡಿಸುವೆ. ಅರಸದೆ ಬಂದ ಅಧಿಕಾರಾವಧಿಯಲ್ಲಿ ಹೆಚ್ಚು ಸಮಯವನ್ನು ಈ ಸೇವೆಗೆ ಬಳಸುವ ಇಚ್ಛೆ ನನ್ನದಾಗಿದ್ದು ನಗರದ ಒಳಿತಿಗೆ ವಿನಿಯೋಗಿಸುವೆ ಎಂದರು.ಪಂಚಮಸಾಲಿ ಸಮುದಾಯದ ತಾಲೂಕು ಅಧ್ಯಕ್ಷ ಮಹದೇವಪ್ಪ ಬಾಗಸರ, ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ.ಜಗದೀಶ, ಮಾರುತಿ ಶಿಡ್ಲಾಪೂರ, ಮಧು ಪಾಣೀಗಟ್ಟಿ, ರಾಜು ಗುಡಿ, ಫಕ್ಕೀರೇಶ ಕಾಮಣ್ಣನವರ, ರಮೇಶ ಕೋಟಿ, ಶಂಭು ಆಲದಕಟ್ಟ, ನಿಜಲಿಂಗಪ್ಪ ಮುದಿಯಪ್ಪನವರ, ಕರಬಸಪ್ಪ ಶಿವೂರ, ಬಸವರಾಜ ಆಲದಕಟ್ಟಿ, ಪ್ರಭು ಆಲದಕಟ್ಟಿ, ಗೀತಾ ಪೂಜಾರ, ಬಸವರಾಜ ಆಲದಕಟ್ಟಿ ಮೊದಲಾದವರು ಈ ಸಂದರ್ಭದಲ್ಲಿದ್ದರು.