ಪಂಚಮಸಾಲಿ ಮೀಸಲಾತಿ ಹೋರಾಟ ಹತ್ತಿಕ್ಕುವ ಕುತಂತ್ರ: ಮುನೇನಕೊಪ್ಪ

| Published : Dec 12 2024, 12:33 AM IST

ಸಾರಾಂಶ

ಹೋರಾಟಗಾರರ ತಲೆ ಒಡೆಯುವುದು, ಕೈ-ಕಾಲು ಮುರಿಯುವುದು ಎಷ್ಟು ಸರಿ?. ಸ್ವಾಮೀಜಿಯನ್ನು ಬಂಧಿಸುವ ಅವಶ್ಯಕತೆ ಏನಿತ್ತು. ಲಾಠಿ ಚಾರ್ಜ್ ಮಾಡಲು ಅಲ್ಲಿದ್ದವರು ಗಲಭೆಕೋರರಲ್ಲ. ಅವರೆಲ್ಲ ತಮ್ಮ ಹಕ್ಕಿಗಾಗಿ ಹೋರಾಟಕ್ಕೆ ಬಂದವರು.

ಹುಬ್ಬಳ್ಳಿ:

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ನಡೆಯುತ್ತಿದ್ದ ಹೋರಾಟವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಹತ್ತಿಕ್ಕುವ ಕುತಂತ್ರ ಮಾಡಿದ್ದರಿಂದಲೇ ಇಷ್ಟೊಂದು ರಾದ್ಧಾಂತ ನಡೆದಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಿಡಿಕಾರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಹೋರಾಟ ಶಾಂತಿಯುತವಾಗಿ ನಡೆದಿತ್ತು. ಆದರೆ, ವ್ಯವಸ್ಥಿತವಾಗಿ ಹೋರಾಟ ಮಣಿಸುವ ಯತ್ನ ನಡೆಯಿತ್ತಲ್ಲದೇ, ಹಲವರ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿದೆ ಎಂದರು.

ಹೋರಾಟಗಾರರ ತಲೆ ಒಡೆಯುವುದು, ಕೈ-ಕಾಲು ಮುರಿಯುವುದು ಎಷ್ಟು ಸರಿ?. ಸ್ವಾಮೀಜಿಯನ್ನು ಬಂಧಿಸುವ ಅವಶ್ಯಕತೆ ಏನಿತ್ತು. ಲಾಠಿ ಚಾರ್ಜ್ ಮಾಡಲು ಅಲ್ಲಿದ್ದವರು ಗಲಭೆಕೋರರಲ್ಲ. ಅವರೆಲ್ಲ ತಮ್ಮ ಹಕ್ಕಿಗಾಗಿ ಹೋರಾಟಕ್ಕೆ ಬಂದವರು. ಈ ಹಿಂದೆ ನವಲಗುಂದ-ನರಗುಂದದಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದಕ್ಕೆ ಅಂದಿನ ಗುಂಡೂರಾವ್ ಸರ್ಕಾರ ಪತನವಾಗಿತ್ತು. ಇಂದು ಪಂಚಮಸಾಲಿ ಸಮುದಾಯದ ಮುಗ್ಧ ಜನರ ಮೇಲೆ ದರ್ಪ ತೋರಿದ್ದಕ್ಕಾಗಿ ಈ ಸರ್ಕಾರವೂ ಪತನವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದಾಗಲೂ ಹೋರಾಟ ನಡೆದಿದೆ. ಲಕ್ಷಾಂತರ ಜನ ಸೇರಿದ್ದರೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿತ್ತು. ಆದರೆ, ಮಂಗಳವಾರ ನಡೆದ ಘಟನೆಯಿಂದಾಗಿ ಮನಸ್ಸಿಗೆ ನೋವನ್ನುಂಟು ಮಾಡಿದೆಯಲ್ಲದೇ, ಮುಖ್ಯಮಂತ್ರಿ ಅವರ ಭಾವನೆ ಏನು ಎಂಬುದು ಬಹಿರಂಗಗೊಂಡಿದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರದ ಈ ಕ್ರಮದಿಂದ ಹೋರಾಟ ನಿಲ್ಲುವುದಿಲ್ಲ. ಇದಕ್ಕೆ ತಕ್ಕ ಪಾಠವನ್ನು ಸಮಾಜ ಕಲಿಸಲಿದೆ ಎಂದು ಎಚ್ಚರಿಸಿದ ಮುನೇನಕೊಪ್ಪ, ಗುರುವಾರದ ಹೋರಾಟದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.