ಕ್ಷೇತ್ರದಲ್ಲಿ ನಾಲ್ಕು ವಿದ್ಯುತ್ ವಿತರಣಾ ಕೇಂದ್ರಗಳನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಪಿಎಂ ಕುಸುಮ್ ಯೋಜನೆಯಡಿ ಕನಗನಹಳ್ಳಿ ಬಳಿ ಸೋಲಾರ್ ಪವರ್ ಪ್ಲಾಂಟ್ ನಿರ್ಮಾಣ,ಶೆಟ್ಟಹಳ್ಳಿ ಬಳಿ ಮತ್ತೊಂದು ಸೋಲಾರ್ ಪ್ಲಾಂಟ್ ನಿರ್ಮಾಣ, ಆನುವಾಳು ಬಳಿ ಸುಮಾರು 10 ಎಕರೆ ಜಾಗದಲ್ಲಿ 220 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಮಾಡಲು ಕ್ರಮವಹಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಕೆ.ಹೊಸೂರು ಗ್ರಾಮದ ಬಳಿ 20 ಕೋಟಿ ವೆಚ್ಚದಲ್ಲಿ 66/11 ಕೆವಿ ವಿದ್ಯುತ್ ವಿತರಣಾ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ರೈತರ ವಿದ್ಯುತ್ ಸರಬರಾಜಿನಲ್ಲಿ ಉಂಟಾಗುತ್ತಿದ್ದ ವ್ಯತ್ಯಯವನ್ನು ತಡೆಗಟ್ಟುವ ಉದ್ದೇಶದಿಂದ ಕೆಪಿಟಿಸಿಎಲ್‌ನಿಂದ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಲಾಗಿದೆ ಎಂದರು.

ಈ ಯೋಜನೆಯಿಂದ ಕೆ.ಹೊಸೂರು, ಟಿ.ಎಸ್.ಛತ್ರ, ಇಂಗಲಕುಪ್ಪೆ, ಕೆರೆತೊಣ್ಣೂರು ಭಾಗದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು, ರೈತರಿಗೆ ಅನುಕೂಲವಾಗಲಿದೆ. ಜೊತೆಗೆ ಇದೇ ಪ್ಲಾಂಟ್‌ನಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆ ಮಾಡಿದರೆ ಸಬ್ ಸ್ಟೇಷನ್‌ಗೆ ಬೇಕಾಗುವಷ್ಟು ವಿದ್ಯುತ್ ಅನ್ನು ಪಡೆದುಕೊಳ್ಳಬಹುದು ಎಂದರು.

ರೈತರು ಬೆಳೆಗಳಿಗೆ ರಾತ್ರಿ ವೇಳೆಯಲ್ಲಿ ವಿದ್ಯುತ್ ವಿತರಣೆ ಮಾಡುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎನ್ನುವ ಮಾತಗಳು ರೈತರಿಂದ ಕೇಳಿಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬೆಳಗ್ಗಿನ ಸಮಯದಲ್ಲಿ ವಿದ್ಯುತ್ ನೀಡಲು ಕ್ರಮವಹಿಸಲಾಗುವುದು ಎಂದರು.

ಕ್ಷೇತ್ರದಲ್ಲಿ ನಾಲ್ಕು ವಿದ್ಯುತ್ ವಿತರಣಾ ಕೇಂದ್ರಗಳನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಪಿಎಂ ಕುಸುಮ್ ಯೋಜನೆಯಡಿ ಕನಗನಹಳ್ಳಿ ಬಳಿ ಸೋಲಾರ್ ಪವರ್ ಪ್ಲಾಂಟ್ ನಿರ್ಮಾಣ,ಶೆಟ್ಟಹಳ್ಳಿ ಬಳಿ ಮತ್ತೊಂದು ಸೋಲಾರ್ ಪ್ಲಾಂಟ್ ನಿರ್ಮಾಣ, ಆನುವಾಳು ಬಳಿ ಸುಮಾರು 10 ಎಕರೆ ಜಾಗದಲ್ಲಿ 220 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಮಾಡಲು ಕ್ರಮವಹಿಸಲಾಗುತ್ತಿದೆ. ಆ ಯೋಜನೆ ನಿರ್ಮಾಣವಾದರೆ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

ಕೆಪಿಟಿಸಿಎಲ್ ಇಇ ವಸಂತ್ ಕುಮಾರ್ ಮಾತನಾಡಿ, ಕೆ.ಹೊಸೂರು ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ವಿದ್ಯುತ್ ವಿತರಣಾ ಕೇಂದ್ರದಲ್ಲಿ 12ಫೀಡರ್‌ಗಳು ನಿರ್ಮಾಣ ಮಾಡಲಾಗುವುದು. ಇದರಿಂದ ರೈತರಿಗೆ ಸಂಪರ್ಕ ವಿದ್ಯುತ್ ವಿತರಣೆ ಮಾಡಲಾಗುವುದು, ಲೈನ್ ನಿರ್ಮಾಣ ಮಾಡುವಾಗ ರೈತರು ಸಹಕಾರ ನೀಡಬೇಕು ಎಂದರು.

ಈ ವೇಳೆ ಸೆಸ್ಕ್ ಎಇಇ ರವಿಕುಮಾರ್, ರಮೇಶ್, ಮಂಜುನಾಥ್, ಚಲುವಪ್ಪ, ವೆಂಕಟೇಶ್, ಗುತ್ತಿಗೆದಾರ ಪುರುಷೊತ್ತಮ್ ಸೇರಿದಂತೆ ಹಲವರು ಹಾಜರಿದ್ದರು.