ಶಿಷ್ಟಾಚಾರ ಉಲ್ಲಂಘಿಸಿದ ಪಾಂಡವಪುರ ತಾಲೂಕು ಆಡಳಿತ: ಆಕ್ರೋಶ

| Published : Nov 02 2024, 01:26 AM IST

ಸಾರಾಂಶ

ಪಾಂಡವಪುರ ತಾಲೂಕು ಆಡಳಿತದಿಂದ ಪಟ್ಟಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಘಟನೆ ನಡೆಯಿತು. ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣೆ ಸಮಾರಂಭಗಳಲ್ಲಿ ಸ್ಥಳೀಯ ಶಾಸಕರು, ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ವೇದಿಕೆಯ ಮೇಲೆ ಕೂರಿಸುವುದು ಶಿಷ್ಟಾಚಾರವಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕು ಆಡಳಿತದಿಂದ ಪಟ್ಟಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಘಟನೆ ನಡೆಯಿತು.

ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣೆ ಸಮಾರಂಭಗಳಲ್ಲಿ ಸ್ಥಳೀಯ ಶಾಸಕರು, ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ವೇದಿಕೆಯ ಮೇಲೆ ಕೂರಿಸುವುದು ಶಿಷ್ಟಾಚಾರವಾಗಿದೆ. ಆದರೆ, ತಾಲೂಕು ಆಡಳಿತ ಯಾವುದೇ ಚುನಾಯಿತ ಪ್ರತನಿಧಿಗಳಲ್ಲದ ಸಂಘ-ಸಂಸ್ಥೆ, ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನು ಸಹ ವೇದಿಕೆ ಮೇಲೆ ಕೂರಿಸುವ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿದರು.

ವೇದಿಕೆ ಮೇಲೆ ಪುರಸಭೆ ಸದಸ್ಯರು ಹಿಂಭಾಗದ ಆಸನಗಳಲ್ಲಿ ಕುಳಿತಿದ್ದರೇ, ರಾಜಕೀಯ ಪಕ್ಷಗಳ ಅಧ್ಯಕ್ಷರು, ಮುಖಂಡರು ವೇದಿಕೆ ಮುಂಭಾಗದ ಆಸನಗಳಲ್ಲಿ ಕೂರಿಸಿದ್ದರು. ಕಾರ್‍ಯಕ್ರಮಕ್ಕೆ ರಾಜಕೀಯ ಪಕ್ಷದ ಮುಖಂಡರು, ಕಾರ್‍ಯಕರ್ತರನ್ನು ಆಹ್ವಾನಿಸಿದರೆ ವೇದಿಕೆ ಪಕ್ಕದಲ್ಲಿ ಅವರಿಗೆ ಆಸನದ ವ್ಯವಸ್ಥೆ ಮಾಡಿ ಕೂರಿಸಿ ಕಾರ್‍ಯಕ್ರಮ ನಡೆಸಲಿದೆ. ಅದನ್ನು ಬಿಟ್ಟು ಸರ್ಕಾರ ಕಾರ್‍ಯಕ್ರಮದಲ್ಲಿ ರಾಜಕೀಯ ಪಕ್ಷಗಳ ಅಧ್ಯಕ್ಷರು, ಮುಖಂಡರನ್ನು ವೇದಿಕೆ ಕೂರಿಸಿ ಕಾರ್‍ಯಕ್ರಮ ನಡೆಸಿದ ತಾಲೂಕು ಆಡಳಿತದ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದರು.

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಗೈರು:

ಕನ್ನಡ ರಾಜ್ಯೋತ್ಸವದಲ್ಲಿ ಅಧ್ಯಕ್ಷತೆ ವಹಿಸಬೇಕಿಗಿದ್ದ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಗೈರು ಹಾಜರಾಗಿದ್ದರು. ಮೊದಲ ವರ್ಷ ನಡೆದ ಕನ್ನಡ ರಾಜ್ಯೋತ್ಸವಕ್ಕೂ ಶಾಸಕರು ಗೈರಾಗಿದ್ದರು.

ಅಮೆರಿಕಾಗೆ ತೆರಳಿರುವುದರಿಂದ ಎರಡನೇ ವರ್ಷದ ಕನ್ನಡ ರಾಜ್ಯೋತ್ಸವಕ್ಕೂ ಗೈರಾದರು. ಕ್ಷೇತ್ರದ ಪ್ರಥಮ ಪ್ರಜೆಯಾದ ಶಾಸಕರು ರಾಷ್ಟ್ರೀಯ, ನಾಡಹಬ್ಬ ಹಾಗೂ ಕೆಲವು ಮಹಾನೀಯರ ಜಯಂತಿ ಕಾರ್‍ಯಕ್ರಮಗಳಿಗೆ ಗೈರು ಹಾಜರಾಗುತ್ತಿರುವುದು ಕ್ಷೇತ್ರದ ಜನರ ಆಕ್ರೋಶಕ್ಕೆ ಕಾರಣವಾಗಿದೆ.