ನಿರುಪಯುಕ್ತ ಟೈರ್‌ಗಳು ಹಾಗೂ ಮರದ ಸಾಮಗ್ರಿಗಳನ್ನು ಬಳಸಿ ಅವುಗಳಿಗೆ ಬಣ್ಣವನ್ನು ಲೇಪಿಸಿ ಕಸ ಹರಡುತ್ತಿದ್ದ ಸ್ಥಳಗಳಲ್ಲಿ ‘ಹಾಟ್ ಸ್ಪಾಟ್‘ ನಿರ್ಮಿಸಿದ್ದು, ಸಾರ್ವಜನಿಕರು ಕುಳಿತುಕೊಳ್ಳಲು ಕುರ್ಚಿಗಳ ಮಾದರಿಯಲ್ಲಿ ರಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಜನನಿಬಿಡ ಸ್ಥಳಗಳಲ್ಲಿ ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಡದಂತೆ ಸ್ಥಳೀಯ ಪುರಸಭೆಯಿಂದ ಹಾಟ್ ಸ್ಪಾಟ್ ಸ್ಥಳಗಳನ್ನು ನಿರ್ಮಿಸಿ ಕಸ ಹಾಕದಂತೆ ತಡೆಯಲಾಗಿದೆ.

ಈ ಮೊದಲು ಪಟ್ಟಣದ ಶಾಂತಿನಗರದ ಅರಳೀಕಟ್ಟೆ ಬಳಿ ವಿಶ್ವೇಶ್ವರಯ್ಯ ನಾಲೆ ಸಮೀಪ ಕಸ ಹಾಕದಂತೆ ಹಾಟ್ ಸ್ಪಾಟ್ ನಿರ್ಮಿಸಲಾಗಿದೆ. ಇದೀಗ ವಿ.ಸಿ.ಕಾಲೋನಿಯಲ್ಲಿ ಹಾಟ್ ಸ್ಪಾಟ್ ನಿರ್ಮಿಸಿದ್ದು, ಪಟ್ಟಣದ ಎಲ್ಲಾ 23 ವಾರ್ಡ್ ಗಳಲ್ಲೂ ಹಾಟ್ ಸ್ಪಾಟ್ ಗುರುತಿಸಿ ಸಾರ್ವಜನಿಕರು ಅಲ್ಲಿ ಕಸ ಹಾಕದಂತೆ ಬಂದೋಬಸ್ತ್ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದರು.

ನಿರುಪಯುಕ್ತ ಟೈರ್‌ಗಳು ಹಾಗೂ ಮರದ ಸಾಮಗ್ರಿಗಳನ್ನು ಬಳಸಿ ಅವುಗಳಿಗೆ ಬಣ್ಣವನ್ನು ಲೇಪಿಸಿ ಕಸ ಹರಡುತ್ತಿದ್ದ ಸ್ಥಳಗಳಲ್ಲಿ ‘ಹಾಟ್ ಸ್ಪಾಟ್‘ ನಿರ್ಮಿಸಿದ್ದು, ಸಾರ್ವಜನಿಕರು ಕುಳಿತುಕೊಳ್ಳಲು ಕುರ್ಚಿಗಳ ಮಾದರಿಯಲ್ಲಿ ರಚಿಸಲಾಗಿದೆ ಎಂದರು.

ಸಾರ್ವಜನಿಕರು ಎಲ್ಲೆಂದರಲ್ಲಿ ಕಸವನ್ನು ಬೀಸಾಡಬಾರದು. ಪುರಸಭೆ ವಾಹನಗಳಿಗೆ ಒಣಕಸ ಹಾಗೂ ಹಸಿಕಸವನ್ನು ಪ್ರತ್ಯೇಕಗೊಳಿಸಿ ನೀಡಬೇಕು. ಜತೆಗೆ ವಿಶ್ವೇಶ್ವರಯ್ಯ ನಾಲೆಯಲ್ಲಿ ಕೋಳಿ ಹಾಗೂ ಹಂದಿ ತ್ಯಾಜ್ಯಗಳನ್ನು ಬೀಸಾಡಲಾಗುತ್ತಿದೆ. ಇದರಿಂದ ಜನಜಾನುವಾರು ಕುಡಿಯುವ ನೀರು ಕಲುಷಿತವಾಗುತ್ತಿರುವುದರಿಂದ ನಾಲೆಗಳಲ್ಲಿ ಕೋಳಿ ಹಾಗೂ ಹಂದಿ ತ್ಯಾಜ್ಯಗಳನ್ನು ಬೀಸಾಡದೆ ಸ್ವಚ್ಛತೆ ಕಾಪಾಡಬೇಕು. ಇಲ್ಲದಿದ್ದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಇದೇ ವೇಳೆ ಸ್ಮಶಾನದ ಬಳಿ 15ನೇ ಹಣಕಾಸು ಯೋಜನೆಯಡಿ ನಿರ್ಮಿಸುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಮುಖ್ಯಾಧಿಕಾರಿ ಸತೀಶ್ ಕುಮಾರ್ ಪರಿಶೀಲಿಸಿದರು. ಸ್ಮಶಾನಕ್ಕೆ ಶವ ಸಂಸ್ಕಾರ ನೆರವೇರಿಸುವ ವೇಳೆ ಸಾರ್ವಜನಿಕರು ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದರಿಂದ ಹೆಣಗಾಡಬೇಕಿತ್ತು. ಇದೀಗ ರಸ್ತೆ ಡಾಂಬರೀಕರಣದಿಂದಾಗಿ ಆ ಸಮಸ್ಯೆ ಬಗೆಹರಿದಂತಾಗಿದೆ. ಈ ವೇಳೆ ಪುರಸಭೆ ಎಂಜಿನಿಯರ್ ಯಶಸ್ವಿನಿ, ಆರೋಗ್ಯ ನಿರೀಕ್ಷಕ ಮಂಜುನಾಥ್, ಪರಿಸರ ಎಂಜಿನಿಯರ್ ಶಫೀನಾಜ್, ಗುತ್ತಿಗೆದಾರ ಎಚ್.ಸಿ.ಮಹೇಶ್, ಪೌರ ಕಾರ್ಮಿಕರು ಹಾಗೂ‌ ಸಿಬ್ಬಂದಿ ವರ್ಗದವರು ಹಾಜರಿದ್ದರು.