ಕನ್ನಡಪ್ರಭ ವಾರ್ತೆ ಪಾಂಡವಪುರ

ಪಾಂಡವಪುರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ)ನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶಿವಣ್ಣ ಆಯ್ಕೆಯಾದರು.

15 ಮಂದಿ ಸದಸ್ಯರ ಸಂಖ್ಯಾಬಲ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಜೆಡಿಎಸ್ ಬೆಂಬಲಿತ 8 ಹಾಗೂ ರೈತಸಂಘ-ಕಾಂಗ್ರೆಸ್- 6, ಸರಕಾರಿ ನಾಮಿನಿ-1 ಮಂದಿ ಸದಸ್ಯರಿದ್ದಾರೆ. ಹಿಂದಿನ ಅಧ್ಯಕ್ಷ ಚಲುವೇಗೌಡ (ಬಕೋಡಿ)ರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದು ಜೆಡಿಎಸ್ ಬೆಂಬಲಿತ ನಿರ್ದೇಶಕ ಶಿವಣ್ಣ ಹಾಗೂ ರೈತಸಂಘ-ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಕೆ.ಆರ್.ಸುರೇಶ್ ನಾಮಪತ್ರ ಸಲ್ಲಿಸದರು.

ನಂತರ ಚುನಾವಣಾಧಿಕಾರಿಯೂ ಆದ ಬ್ಯಾಂಕ್ ಕಾರ್ಯದರ್ಶಿ ಸಂಪತ್‌ಕುಮಾರ್ ಚುನಾವಣೆಯಲ್ಲಿ ಗುಪ್ತ ಮತದಾನ ಪ್ರಕ್ರಿಯೆ ನಡೆಸಿದರು. ಅಂತಿಮವಾಗಿ ಶಿವಣ್ಣ 9 ಮತ ಹಾಗೂ ಕೆ.ಎಆರ್.ಸುರೇಶ್ 6 ಮತ ಪಡೆದು 3 ಮತಗಳ ಅಂತರಿಂದ ಶಿವಣ್ಣ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆ ಫಲಿತಾಂಶದಿಂದ ಸ್ಥಳೀಯ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಅವರಿಗೆ ಹಿನ್ನೆಡೆಯಾಯಿತು. ಶಿವಣ್ಣ ಗೆಲುವು ಸಾಧಿಸುತ್ತಿದ್ದಂತೆಯೇ ಹೊರಗಡೆ ಬೆಂಬಲಿತರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು.

ಬಳಿಕ ಬ್ಯಾಂಕ್‌ನ ನೂತನ ಅಧ್ಯಕ್ಷ ಶಿವಣ್ಣ ನಿರ್ದೇಶಕರು, ಮುಖಂಡರು, ಬೆಂಬಲಿಗರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಮ್ಮ ನಾಯಕರಾದ ಸಿ.ಎಸ್.ಪುಟ್ಟರಾಜು ಅವರ ಆಶೀರ್ವಾದ ಹಾಗೂ ನಮ್ಮ ಜೆಡಿಎಸ್ ನಿರ್ದೇಶಕರ ಬೆಂಬಲದಿಂದ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರಪಡೆದು ಬ್ಯಾಂಕ್ ಅಭ್ಯರ್ಥಿಗೆ ಶ್ರಮಿಸುತ್ತೇನೆ. ರೈತರಿಗೆ ಹೆಚ್ಚಿನ ಸಾಲಸೌಲಭ್ಯ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.


ಈ ವೇಳೆ ಉಪಾಧ್ಯಕ್ಷೆ ಸುನಂದಮ್ಮ, ನಿರ್ದೇಶಕರಾದ ಎಂ.ಸಿ.ಯಶವಂತ್‌ಕುಮಾರ್, ಎನ್.ಮುರುಳಿ, ಕುಮಾರ್ ಕೆ., ಚಲುವೇಗೌಡ, ನಾಗಶೆಟ್ಟಿ, ನಂಜೇಗೌಡ(ಜಿ.ಡಿ.ವಾಸು), ಬಿ.ನರೇಂದ್ರಬಾಬು, ಎಚ್.ಎನ್.ದಯಾನಂದ, ಸಿ.ಎಂ.ಚಂದ್ರಶೇಖರ್, ಎಚ್.ಎಂ.ಆಶಾಲತಾ, ಎಸ್.ಯೋಗಲಕ್ಷ್ಮಿ, ನಾಮಿನಿ ನಿರ್ದೇಶಕ ನಾಗೇಗೌಡ, ಮುಖಂಡ ಕಣಿವೆಯೋಗೇಶ್ ಸೇರಿದಂತೆ ಹಲವರು ಇದ್ದರು.