ಬ್ಯಾಡಗಿ ಪಟ್ಟಣದ ಐತಿಹಾಸಿಕ ಪಾಂಡುರಂಗ ದೇವಸ್ಥಾನದಲ್ಲಿ ನಾಮದೇವ ಸಿಂಪಿ ಸಮಾಜ ಹಾಗೂ ಭಾವಸಾರ ಕ್ಷತ್ರಿಯ ಸಮಾಜಗಳ ಆಶ್ರಯದಲ್ಲಿ ಆಯೋಜಿಸಿದ್ದ ಮೂರು ದಿನಗಳ ಪಾಂಡುರಂಗ-ರುಕ್ಮಿಣಿ ದಿಂಡಿ ಮಹೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಭಕ್ತಿಪೂರ್ವಕ ಹಾಗೂ ವಿಜೃಂಭಣೆಯಿಂದ ನೆರವೇರಿತು.

ಬ್ಯಾಡಗಿ: ಪಟ್ಟಣದ ಐತಿಹಾಸಿಕ ಪಾಂಡುರಂಗ ದೇವಸ್ಥಾನದಲ್ಲಿ ನಾಮದೇವ ಸಿಂಪಿ ಸಮಾಜ ಹಾಗೂ ಭಾವಸಾರ ಕ್ಷತ್ರಿಯ ಸಮಾಜಗಳ ಆಶ್ರಯದಲ್ಲಿ ಆಯೋಜಿಸಿದ್ದ ಮೂರು ದಿನಗಳ ಪಾಂಡುರಂಗ-ರುಕ್ಮಿಣಿ ದಿಂಡಿ ಮಹೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಭಕ್ತಿಪೂರ್ವಕ ಹಾಗೂ ವಿಜೃಂಭಣೆಯಿಂದ ನೆರವೇರಿತು. ಮಹೋತ್ಸವದ ಅಂಗವಾಗಿ ಮೂರು ದಿನ ನಡೆದ ಧಾರ್ಮಿಕ ವಿಧಿವಿಧಾನಗಳು, ಭಜನೆ, ಪಲ್ಲಕ್ಕಿ ಉತ್ಸವ ಹಾಗೂ ದಿಂಡಿ ಮೆರವಣಿಗೆ ಭಕ್ತರಲ್ಲಿ ಆಧ್ಯಾತ್ಮಿಕ ಉತ್ಸಾಹವನ್ನು ಮೂಡಿಸಿತು.

ಮಹೋತ್ಸವಕ್ಕೆ ಜೂ. 24ರಂದು ದಶಮಿ ಅಂಗವಾಗಿ ಚಾಲನೆ ದೊರೆಯಿತು. ಬೆಳಗ್ಗೆ ಪಾಂಡುರಂಗ ಹಾಗೂ ರುಕ್ಮಿಣಿ ದೇವಿಗೆ ವಿಶೇಷ ಪೂಜೆ, ಮಹಾಮಂಗಳಾರತಿ, ಹರಿನಾಮ ಸಂಕೀರ್ತನೆ ಹಾಗೂ ಭಜನೆ ನಡೆಯಿತು. ನಂತರ ಭಕ್ತರ ಸಮ್ಮುಖದಲ್ಲಿ ಪವಿತ್ರ ಪೋತಿ ಸ್ಥಾಪನೆ ನೆರವೇರಿಸಲಾಯಿತು. ದಿನವಿಡೀ ಭಕ್ತರು ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

ಜೂ-25ರಂದು ತುಳಜಾ ಭವಾನಿ ದೇವಿಯ ಮೂರ್ತಿಗೆ ವೈದಿಕ ಮಂತ್ರೋಚ್ಚಾರಗಳೊಂದಿಗೆ ಮಹಾಭಿಷೇಕ ನೆರವೇರಿಸಲಾಯಿತು. ಬಳಿಕ ಧಾರ್ಮಿಕ ಪ್ರವಚನ, ಭಜನಾ ಕಾರ್ಯಕ್ರಮಗಳು ಹಾಗೂ ಮಹಾಪ್ರಸಾದ ವಿತರಣೆ ನಡೆಯಿತು.

ಶುಕ್ರವಾರ ಜೂ. 26ರಂದು ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಪಲ್ಲಕ್ಕಿ ಉತ್ಸವ ಹಾಗೂ ದಿಂಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಲಂಕೃತ ಪಲ್ಲಕ್ಕಿಯಲ್ಲಿ ವಿರಾಜಮಾನರಾದ ಪಾಂಡುರಂಗ ಹಾಗೂ ರುಕ್ಮಿಣಿ ದೇವರ ಉತ್ಸವ ಮೂರ್ತಿಗಳನ್ನು ಪಟ್ಟಣದ ಪ್ರಮುಖ ಬೀದಿಗಳಾದ ಚಾವಡಿ ರಸ್ತೆ, ಹಳೆ ಬೆಣ್ಣೆಪೇಟೆ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಮೆರವಣಿಗೆ ನಡೆಸಲಾಯಿತು. ಹರಿನಾಮ ಸಂಕೀರ್ತನೆ, ಭಜನೆ, ತಾಳ-ಮೃದಂಗದ ನಾದ ಹಾಗೂ "ವಿಠ್ಠಲ... ವಿಠ್ಠಲ... " ಎಂಬ ಜಯಘೋಷಗಳ ನಡುವೆ ಸಾಗಿದ ದಿಂಡಿ ಉತ್ಸವ ಭಕ್ತರ ಗಮನ ಸೆಳೆಯಿತು.

ಮೆರವಣಿಗೆಯುದ್ದಕ್ಕೂ ಭಕ್ತರು ಹೂವಿನ ಮಳೆಗರೆದು ದೇವರ ದರ್ಶನ ಪಡೆದರು. ಮಹಿಳೆಯರು ಪೂರ್ಣಕುಂಭ ಹಾಗೂ ಆರತಿಯೊಂದಿಗೆ ಸ್ವಾಗತ ಕೋರಿದರೆ, ಯುವಕರು ಭಜನಾ ತಂಡಗಳೊಂದಿಗೆ ಹೆಜ್ಜೆ ಹಾಕಿ ಧಾರ್ಮಿಕ ಸಂಭ್ರಮವನ್ನು ಹೆಚ್ಚಿಸಿದರು. ಬಳಿಕ ಪಲ್ಲಕ್ಕಿ ಮೆರವಣಿಗೆ ದೇವಸ್ಥಾನ ತಲುಪಿದ ನಂತರ ವಿಶೇಷ ಪೂಜೆ, ಮಂಗಳಾರತಿ ಹಾಗೂ ಮಹಾಪ್ರಸಾದ ವಿತರಣೆಯೊಂದಿಗೆ ಮಹೋತ್ಸವ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಗಣೇಶ ಅಚಲಕರ, ರಾಘವೇಂದ್ರ ದಾವಂಡೆ, ವಿನಾಯಕ ದಾವಂಡೆ, ರಾಜು ನವಲೆ, ಪುಂಡಲಿಕ ಅಚಲಕರ, ವೈಭವ ವಾಳ್ವೇಕರ, ಡಾ. ಪ್ರಕಾಶ ಭಸ್ಮೆ, ಶಂಕರ ಜಿಂಗಾಡೆ, ಪುಂಡಲಿಕಪ್ಪ ದಾವಂಡೆ, ಮುಧೋಳ ಸರ್, ಕೃಷ್ಣಾ ದಾಮೋದರ, ಸರಸ್ವತಿ ಉರಣಕರ, ಸರೋಜಾ ಅಚಲಕರ, ಶಶಿಕಲಾ ನವಲೆ, ಪರಿಮಳ ದಾವಂಡೆ ಸೇರಿದಂತೆ ನಾಮದೇವ ಸಿಂಪಿ ಸಮಾಜ, ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಹಾಗೂ ನೂರಾರು ಭಕ್ತರು ಭಾಗವಹಿಸಿ ಮಹೋತ್ಸವವನ್ನು ಯಶಸ್ವಿಗೊಳಿಸಿದರು.