ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ತೀವ್ರ ಕುತೂಹಲ ಕೆರಳಿಸಿದ್ದ ಪಟ್ಟಣ ಪಂಚಾಯತಿಯ ಮೊದಲ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಜಯಶ್ರೀ ದೇವಣಗಾಂವ ಹಾಗೂ ಉಪಾಧ್ಯಕ್ಷರಾಗಿ ರಮೇಶ ಮಸಿಬಿನಾಳ ಆಯ್ಕೆಯಾದರು. ಒಟ್ಟು 17 ಜನ ಸದಸ್ಯರ ಬಲ ಹೊಂದಿರುವ ಪಪಂಯಲ್ಲಿ ಕಾಂಗ್ರೆಸ್ -07, ಬಿಜೆಪಿ-04, ಜೆಡಿಎಸ್ -04 ಹಾಗೂ ಪಕ್ಷೇತರ-02 ಸದಸ್ಯರಿದ್ದರು.ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹಾಗೂ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರ ನೇತೃತ್ವದಲ್ಲಿ ಮೈತ್ರಿ ಪಕ್ಷಗಳಾದ ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ, ಬಿಜೆಪಿ ಉಪಾಧ್ಯಕ್ಷ ಸ್ಥಾನ ಹಂಚಿಕೊಂಡಿವೆ.ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೈತ್ರಿ ಪಕ್ಷದಿಂದ ಜಯಶ್ರೀ ದೇವಣಗಾಂವ ಅಧ್ಯಕ್ಷ ಸ್ಥಾನಕ್ಕೆ ಹಾಗೂ ರಮೇಶ ಮಸಿಬಿನಾಳ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಬಸೀರ ಅಹ್ಮದ್ ಬೇಪಾರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಡಾ.ಗುರುರಾಜ ಗಡೇದ ನಾಮಪತ್ರ ಸಲ್ಲಿಸಿದರು. ಸಂಸದರಾದ ರಮೇಶ ಜಿಗಜಿಣಗಿ, ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹಾಗೂ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರ ನೇತೃತ್ವದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾದರು.ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಪ್ರಕಾಶ ಸಿಂದಗಿ ಮೈತ್ರಿ ಪಕ್ಷಗಳ ಸದಸ್ಯರು 11 ಸದಸ್ಯರ ಬೆಂಬಲದಿಂದ ಆಯ್ಕೆಯಾಗಿದ್ದಾಗಿ ಘೋಷಿಸಿದರು. ಪಪಂ ಮುಖ್ಯಾಧಿಕಾರಿ ರಾಜೇಶ್ವರಿ ಬಾಗಲಕೋಟೆ ಸಹಾಯಕ ಅಧಿಕಾರಿಗಳಾಗಿ ಕೆಲಸ ನಿರ್ವಹಿಸಿದರು. ಸಿಪಿಐ ಆನಂದರಾವ ಹಾಗೂ ಪಿಎಸ್ಐ ಬಸವರಾಜ ತಿಪ್ಪರಡ್ಡಿ ಭದ್ರತೆ ಕೈಗೊಂಡಿದ್ದರು.ಸಂಭ್ರಮ:
ಪಪಂ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಆಯ್ಕೆಯಾಗುತ್ತಿದ್ದಂತೆ ಇತ್ತ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಗುಲಾಲು ಎರಚಿ ಸಂಭ್ರಮಾಚರಣೆ ಮಾಡಿದರು. ಈ ವೇಳೆ ಪಪಂ ಸದಸ್ಯರಾದ ಕಾಸುಗೌಡ ಬಿರಾದಾರ, ಶಾಂತಯ್ಯ ಜಡಿಮಠ, ಉಮೇಶ ರೂಗಿ, ಕಾಸಪ್ಪ ಜಮಾದಾರ, ಕಾಸಪ್ಪ ಭಜಂತ್ರಿ, ಸಿಂಧೂರ ಡಾಲೇರ, ರತ್ನಬಾಯಿ ದೇವೂರ, ಮಂಗಳೇಶ್ವರ ಕಡ್ಲೇವಾಡ, ಆರೀಫಾಬೇಗಂ ಬಾಗವಾನ, ಶೋಭಾ ಮಲ್ಲಾರಿ, ಸಲೀಮಾ ಮಣೂರ, ದಾನಾಬಾಯಿ ಚವ್ಹಾಣ ಸೇರಿ ಎಲ್ಲ ಪಕ್ಷಗಳ ಮುಖಂಡರು, ಕಾರ್ಯಕರ್ತರು ಇದ್ದರು.