ಅರ್ಧಂಬರ್ಧ ಕಾಮಗಾರಿಗೆ ಪಪಂ ಸದಸ್ಯರ ಆಕ್ರೋಶ

| Published : Jan 09 2025, 12:48 AM IST

ಸಾರಾಂಶ

ಪ್ರಾರಂಭಮಾಡದೆ ಇರುವ ನಗರೋತ್ತಾನ ಕಾಮಗಾರಿಯ ಕುರಿತು ನಗರಾಭಿವೃದ್ಧಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕಮತಗಿ

ಸ್ಥಳೀಯ ಪಟ್ಟಣ ಪಂಚಾಯಿತಿಯ ಕಾರ್ಯಾಲಯದ ಸಭಾಂಗಣದಲ್ಲಿ ಬುಧವಾರ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ರಮೇಶ ಜಮಖಂಡಿ ಅಧ್ಯಕ್ಷತೆಯಲ್ಲಿ 2025-26ನೇ ಸಾಲಿನ ಆಯವ್ಯಯ ತಯಾರಿಕೆಯ ಪೂರ್ವಭಾವಿ ಸಭೆ ನಡೆಯಿತು.

ಪಟ್ಟಣದಲ್ಲಿನ 16 ವಾರ್ಡಗಳಲ್ಲಿ ಅಭಿವೃದ್ಧಿಯಾಗದೆ ಇರುವ ಇನ್ನಷ್ಟು ರಸ್ತೆಗಳ ಸುಧಾರಣೆ ಹಾಗೂ ಚರಂಡಿ ನಿರ್ಮಾಣ, ಲೇಔಟಗಳಲ್ಲಿನ ಉದ್ಯಾನವನ ಸುಧಾರಣೆ, ಸ್ಮಶಾನ ಅಭಿವೃದ್ಧಿ, ನಗರೋತ್ತಾನ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಎರಡು ವರ್ಷವಾದರು ಕಾಮಗಾರಿ ಪ್ರಾರಂಭಿಸದ ಗುತ್ತಿಗೆದಾರರ ವಿರುದ್ಧ ಪಪಂ ಸದಸ್ಯರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ 24/7 ಕುಡಿಯುವ ನೀರಿನ ಕಾಮಗಾರಿಯ ಕೆಲಸವು ಕೂಡಾ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ ನಳಗಳನ್ನು ಅಳವಡಿಸಲು ಅಗೆದಿರುವ ರಸ್ತೆಯನ್ನು ದುರಸ್ತಿ ಮಾಡದೆ ಹಾಗೆ ಬಿಟ್ಟಿರುವುದರಿಂದ ಸಾರ್ವಜನಿಕರಿಗೆ ಸಂಚರಿಸಲು ಬಹಷ್ಟು ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.

ಬಜೆಟ್ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ ಜಮಖಂಡಿ ಅವರು ಪಟ್ಟಣ ಪಂಚಾಯಿತಿ ಸದಸ್ಯರ ಹಾಗೂ ಸಾರ್ವಜನಿಕರು ನೀಡಿದ ಸಲಹೆಯನ್ನು ಆಲಿಸಿ ಮಾತನಾಡಿ, ಪ್ರಾರಂಭಮಾಡದೆ ಇರುವ ನಗರೋತ್ತಾನ ಕಾಮಗಾರಿಯ ಕುರಿತು ನಗರಾಭಿವೃದ್ಧಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೂಡಲೇ ಗುತ್ತಿಗೆದಾರನಿಗೆ ಕಾಮಗಾರಿ ಪ್ರಾರಂಭಿಸಲು ಹಾಗೂ 24/7 ಕುಡಿಯುವ ನೀರಿನ ಪೈಪಲೈನ್ ಅಳವಡಿಕೆ ಕಾಮಗಾರಿಯನ್ನು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ಮಾಡಿ ಎಂದು ಗುತ್ತಿಗೆದಾರರಿಗೆ ಸೂಚಿಸುವೆ ಎಂದರು. ಇನ್ನು ಈಗಾಲೇ ಬಸ್ ನಿಲ್ದಾಣದಿಂದ ನಾಗೇಶ ಮುರಾಳ ಮನೆಯವರೆಗೆ ರಸ್ತೆ ನಿರ್ಮಾಣಕ್ಕೆ 2.50ಕೋಟಿ ರು. ಅನುಮೋದನೆ ದೊರೆತಿದೆ. ಮುಂದಿನ ದಿನಗಳಲ್ಲಿ ಪಟ್ಟಣವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಎಲ್ಲ ಸದಸ್ಯರ ಸಹಕಾರದೊಂದಿಗೆ ಇನ್ನಷ್ಟು ಅನುದಾನವನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡುವೆನು ಎಂದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ದೇವಿಪ್ರಸಾದ ನಿಂಬಲಗುಂದಿ, ಗುರಲಿಂಗಪ್ಪ ಪಾಟೀಲ, ಸಂಗಪ್ಪ ಗಾಣಗೇರ, ಬಸವರಾಜ ಕುಂಬಳಾವತಿ, ಚಂದು ಕುರಿ, ಹುಚ್ಚೇಶ ಮದ್ಲಿ, ಲಕ್ಷ್ಮಣ ಮಾದರ, ಹುಚ್ಚವ್ವ ಹಗೇದಾಳ, ಸುಮಿತ್ರಾ ಲಮಾಣಿ, ಲಕ್ಷ್ಮಣ ದ್ಯಾಮಣ್ಣವರ, ನಾಗೇಶ ಮುರಾಳ, ಮಹಾಂತೇಶ ಬಿಸನಾಳ ಹಾಗೂ ಪಪಂ ನಾಮನಿರ್ದೇಶಿತ, ಆಶ್ರಯ ಕಮಿಟಿ ಸದಸ್ಯರು, ಸಾರ್ವಜನಿಕರು, ಸಂಘ ಸಂಸ್ಥೆಗಳ ಸದಸ್ಯರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಫ್.ಎನ್.ಹುಲ್ಲಿಕೇರಿ ಹಾಗೂ ಪಪಂ ಸಿಬ್ಬಂದಿ ಇದ್ದರು.