ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರದಲ್ಲಿ ನಡೆದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಮೂಡುಬಿದರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕ ಹಾಗೂ ಬಾಲಕಿಯರ ತಂಡಗಳು ಪಂದ್ಯಾವಳಿಗಳಲ್ಲಿ ಜಯಭೇರಿ ಬಾರಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.ಫೈನಲ್ ಟೂರ್ನಿಯಲ್ಲಿ ಅಂತಿಮ ಘಟ್ಟಕ್ಕೆ ತಲುಪಿದ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಬಾಲಕಿಯರ ತಂಡಗಳು ಭಾರೀ ಸೆಣಸಾಟ ನಡೆಸಿದರೂ ಅಂತಿಮವಾಗಿ ತಂಡದ ನಾಯಕಿ ಸಾವಿತ್ರಿ ರಮೇಶ್ ಕರಿಗಾರ್ ಮುಂದಾಳತ್ವದಲ್ಲಿ ಬಿರುಸಿನ ಸ್ಪರ್ಧೆ ನೀಡಿದ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಮೂಡಬಿದರೆಯ ಆಳ್ವಾಸ್ ಪದವಿಪೂರ್ವ ಕಾಲೇಜು ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿ 2- 0 ನೇರ ಸೆಟ್‌ಗಳಿಂದ ಜಯಭೇರಿ ಬಾರಿಸಿತು.
ಬಾಲಕರ ಫೈನಲ್ ಪಂದ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ತಂಡದ ವಿರುದ್ಧ ಭಾರೀ ಪೈಪೋಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ತಂಡದ ನಾಯಕ ಚರಣ್ ಎಸ್. ನೇತೃತ್ವದ ವಿದ್ಯಾರ್ಥಿಗಳು ಜಯಭೇರಿ ಬಾರಿಸಿದರು. ಬಾಲಕರ ವಿಭಾಗದಲ್ಲಿ 2-0 ನೇರ ಸೆಟ್‌ಗಳಿಂದ ಜಯಗಳಿಸಿದರು.ಸೆಮಿಫೈನಲ್:
ಬಾಲಕಿಯರ ಬಿರುಸಿನ ಸೆಮಿಫೈನಲ್ ಪಂದ್ಯಗಳಲ್ಲಿ ಮೊದಲಿಗೆ ಮೈಸೂರು ತಂಡದ ವಿರುದ್ಧ 2- 0 ನೇರ ಸೆಟ್‌ಗಳಿಂದ ದಕ್ಷಿಣ ಕನ್ನಡ ಜಯಗಳಿಸಿತು. ಹಾಸನ ಜಿಲ್ಲೆಯ ಬಾಲಕಿಯರ ತಂಡದ ವಿರುದ್ಧ 2-0 ಸೆಟ್‌ಗಳಿಂದ ಉತ್ತರ ಕನ್ನಡ ಜಿಲ್ಲೆಯ ತಂಡ ಜಯಭೇರಿ ಬಾರಿಸಿತು.ಅದೇ ರೀತಿ ಬಾಲಕರ ವಿಭಾಗದಲ್ಲಿ ಸೆಮಿಫೈನಲ್ ಟೂರ್ನಿಯಲ್ಲಿ ಕೊಪ್ಪಳ ತಂಡದ ವಿರುದ್ಧ 2-0 ಸೆಟ್‌ಗಳಿಂದ ದಕ್ಷಿಣ ಕನ್ನಡ ಜಿಲ್ಲೆ ತಂಡ ಜಯಭೇರಿ ಬಾರಿಸಿತು. ಬಾಗಲಕೋಟೆಯ ತಂಡದ ವಿರುದ್ಧ 2-0 ಸೆಟ್‌ಗಳಿಂದ ಚಿಕ್ಕಮಗಳೂರು ತಂಡ ಜಯಗಳಿಸಿತು.
ಪ್ರಶಸ್ತಿ ವಿತರಣೆ:ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಬಾಲಕರ ಹಾಗೂ ಬಾಲಕಿಯರ ತಂಡಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಫಾಲಾಕ್ಷ ಟಿ., ಟ್ರೋಫಿ, ಚಿನ್ನದ ಪದಕ ಹಾಗೂ ಪ್ರಮಾಣಪತ್ರ ವಿತರಿಸಿದರು.
ಪಶಸ್ತಿ ವಿತರಿಸಿ ಮಾತನಾಡಿದ ಉಪನಿರ್ದೇಶಕ ಫಾಲಾಕ್ಷ ಟಿ., ಸೆಮಿಫೈನಲ್ ಹಾಗೂ ಫೈನಲ್‌ನಲ್ಲಿ ನಡೆದ ಸ್ಪರ್ಧೆ ಭಾರಿ ಸೆಣಸಾಟದಿಂದ ಕೂಡಿದ್ದು, ಎಲ್ಲ ತಂಡಗಳು ಭಾರೀ ಸ್ಪಧೆಯನ್ನೇ ಒಡ್ಡಿವೆ. ಅಂತಿಮ ಘಟ್ಟದಲ್ಲಿ ಸ್ಪರ್ಧಿಸಿದ ತಂಡಗಳ ಚತುರ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಜ್ಜುಗೊಳಿಸಲಾಗುವುದು ಎಂದರು.ವಿಜಯನಗರ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ನಾಗರಾಜ್ ಹವಾಲ್ದಾರ್, ಕ್ರೀಡಾಕೂಟ ಹೊಣೆ ಹೊತ್ತುಕೊಂಡ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಿ. ವಿದ್ಯಾಧರ ಹಾಗೂ ನಿರ್ದೇಶಕ ಸಾಗರ್ ಕೋದಂಡಪಾಣಿ, ಅಂಪೈರ್‌ಗಳಾಗಿ ಕರ್ತವ್ಯ ನಿರ್ವಹಿಸಿ ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಮಧುಕರ, ಶಿವಕುಮಾರ್, ವೆಂಕಟೇಶ್, ಪ್ರಶಾಂತ್, ಸಂತೋಷ ರೆಡ್ಡಿ ಹಾಗೂ ರಾಜ್ಯ ವೀಕ್ಷಕರನ್ನು ಸನ್ಮಾನಿಸಲಾಯಿತು.