ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ನಾನಾ ಕಸರತ್ತು ನಡೆಸುತ್ತಿರುವ ಸ್ವಿಪ್ ಕಮಿಟಿ, ಇದೀಗ ಮತದಾನ ಹೆಚ್ಚಿಸುವುದಕ್ಕಾಗಿ ರಾಯಬಾರಿಗಳನ್ನಾಗಿ ಅಂತಾರಾಷ್ಟ್ರೀಯ ಪ್ಯಾರಾ ಶೂಟರ್ಸ್‌ಗಳನ್ನು ಆಯ್ಕೆ ಮಾಡಿದೆ.
ಪ್ರತಿ ಚುನಾವಣೆಗಳಲ್ಲೂ ಮತದಾನದ ಪ್ರಮಾಣ ಮಾತ್ರ ಹೆಚ್ಚಿಗೆ ಆಗುತ್ತಲೇ ಇಲ್ಲ. ಅದರಲ್ಲೂ ಸುಶಿಕ್ಷಿತರೇ ಮತದಾನದಿಂದ ದೂರ ಉಳಿಯುವುದು ಮಾಮೂಲಿ ಎಂಬಂತಾಗಿದೆ. ಹೀಗಾಗಿ ಚುನಾವಣಾ ಆಯೋಗವೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಜಿಪಂ ಸಿಇಒ ನೇತೃತ್ವದಲ್ಲಿ ಸ್ವೀಪ್ ಕಮಿಟಿಯನ್ನೂ ನಿರ್ಮಿಸಿದೆ.ಸ್ವೀಪ್ ಕಮಿಟಿ ಕೂಡ ಬೀದಿ ನಾಟಕ, ಜಾಗೃತಿ ಜಾಥಾ, ವಿವಿಧೆಡೆ ಸಂವಾದ, ಬೈಕ್ ರ್‍ಯಾಲಿ ಸೇರಿದಂತೆ ಹಲವು ಬಗೆಯ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದೀಗ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಯಾರಾ ಶೂಟರ್ಸ್‌ಗಳನ್ನು ರಾಯಬಾರಿಗಳನ್ನು ಮಾಡಿಕೊಂಡಿದೆ. ಇವರ ಮೂಲಕವೂ ಇದೀಗ ಜಾಗೃತಿ ಕಾರ್ಯವನ್ನು ಮಾಡುತ್ತಿದೆ.
ಯಾರಿವರು?:ಜ್ಯೋತಿ ಸಣ್ಣಕ್ಕಿ ಹಾಗೂ ರಾಕೇಶ ನಿಡಗುಂದಿ ಎಂಬಿಬ್ಬರನ್ನು ರಾಯಬಾರಿಗಳನ್ನಾಗಿ ಮಾಡಿಕೊಳ್ಳಲಾಗಿದೆ. ಇವರಿಬ್ಬರು ಅಂಗವಿಕಲರು. ಆದರೆ ಮನಸು ಮಾಡಿದರೆ ಸಾಧನೆಗೆ ಅಂಗವಿಕಲತೆ ಸಮಸ್ಯೆಯಾಗುವುದಿಲ್ಲ ಎಂಬುದಕ್ಕೆ ಈ ಇಬ್ಬರು ಉತ್ತಮ ಉದಾಹರಣೆ. ಈ ಇಬ್ಬರಿಗೂ ನಡೆಯಲು ಬಾರದು. ವ್ಹೀಲ್ ಚೇರ್ ಅವಲಂಬಿತರು. ಆದರೆ ಶೂಟರ್ಸ್‌ನಲ್ಲಿ ಮಾತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದವರು.
ಹುಬ್ಬಳ್ಳಿಯ ನಿವಾಸಿಯಾಗಿರುವ ಜ್ಯೋತಿ ಸಣ್ಣಕ್ಕಿ ಕಳೆದ 6 ವರ್ಷದಿಂದ ಶೂಟಿಂಗ್‌ನಲ್ಲಿ ತಯಾರಿ ನಡೆಸುತ್ತಿದ್ದಾರೆ. ಈ ವರೆಗೆ ವಲಯ, ರಾಜ್ಯ, ರಾಷ್ಟ್ರೀಯ ಹಾಗೂ ದೆಹಲಿಯಲ್ಲಿ ಇತ್ತೀಚಿಗಷ್ಟೇ ನಡೆದ ವಲ್ಡ್ ಕಪ್ ಪ್ಯಾರಾ ಶೂಟರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಸೈ ಎನಿಸಿಕೊಂಡವರು. ಈ ವರೆಗೆ 40 ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಚಿನ್ನ, ಬೆಳ್ಳಿ, ಕಂಚು ಸೇರಿದಂತೆ ಹಲವು ಪದಕ ಪಡೆದವರು. ಇದೀಗ ಪ್ಯಾರಾ ಒಲಿಂಪಿಕ್ ಸ್ಪರ್ಧೆಯಲ್ಲಿ ಭಾಗವಹಿಸಲು ದೆಹಲಿಯಲ್ಲಿ ತರಬೇತಿ ಕೂಡ ಪಡೆಯುತ್ತಿದ್ದಾರೆ. ಬರೀ ಪ್ಯಾರಾ ಶೂಟರ್ ಮಾತ್ರ ಅಲ್ಲ. ಎಂ.ಎ ಪದವೀಧರೆಯೂ ಹೌದು.ಇನ್ನು ರಾಕೇಶ ನಿಡಗುಂದಿ ಕೂಡ ಹುಬ್ಬಳ್ಳಿಯವರು. ಬಿವಿಎ ಪದವೀಧರ. ಕಳೆದ ನಾಲ್ಕು ವರ್ಷಗಳಿಂದ ಶೂಟಿಂಗ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರು ಕೂಡ ವಲಯ, ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚು ಪದಕಗಳನ್ನೆಲ್ಲ ಬಾಚಿಕೊಂಡವರು. ದೆಹಲಿಯಲ್ಲಿ ನಡೆದ ವಲ್ಡ್ ಕಪ್ ಪ್ಯಾರಾ ಶೂಟರ್ಸ್‌ನಲ್ಲಿ ಭಾಗವಹಿಸಿದವರು. ಇವರು ಕೂಡ ಇದೀಗ ಪ್ಯಾರಾ ಒಲಿಂಪಿಕ್ ಸ್ಪರ್ಧೆಯಲ್ಲಿ ಭಾಗವಹಿಸಲು ದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದೀಗ ಮತದಾನದ ಜಾಗೃತಿ ಮೂಡಿಸುವುದಕ್ಕಾಗಿ ತರಬೇತಿ ಬಿಟ್ಟು ಹುಬ್ಬಳ್ಳಿಗೆ ಆಗಮಿಸಿದ್ದು, ಸ್ವೀಪ್ ಕಮಿಟಿ ಆಯೋಜಿಸುವ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಈ ಇಬ್ಬರನ್ನು ಮತದಾನ ಜಾಗೃತಿಗಾಗಿ ಇದೀಗ ಚುನಾವಣಾ ಆಯೋಗವೂ ಧಾರವಾಡ ಜಿಲ್ಲೆಯ ರಾಯಭಾರಿಗಳನ್ನಾಗಿ ನೇಮಿಸಿದೆ. ಇವರು ಕೂಡ ಖುಷಿ ಪಟ್ಟಿದ್ದು, ಸಂತಸದಿಂದಲೇ ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ. ಮತದಾನ ಎಲ್ಲರ ಹಕ್ಕು, ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಸಲವಾದರೂ ಮತದಾನದ ಪ್ರಮಾಣ ಹೆಚ್ಚಾಗಲಿ ಎಂಬುದು ಪ್ರಜ್ಞಾವಂತರ ಆಶಯ.ನನ್ನನ್ನು ಮತದಾನ ಜಾಗೃತಿಗೆ ರಾಯಭಾರಿಯನ್ನಾಗೆ ಚುನಾವಣಾ ಆಯೋಗ ನೇಮಿಸಿರುವುದು ಸಂತಸವಾಗಿದೆ. ಸ್ವೀಪ್ ಕಮಿಟಿ ಎಲ್ಲಿ ಹೇಳುತ್ತದೆಯೋ ಅಲ್ಲಿನ ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ. ಮತದಾನ ಪ್ರಮಾಣ ಹೆಚ್ಚಾಗಬೇಕು. ಅದಕ್ಕೆ ನಾನು ನನ್ನ ಕೈಲಾದಷ್ಟು ಶ್ರಮ ಪಡುತ್ತೇನೆ ಎಂದು ಜ್ಯೋತಿ ಸಣ್ಣಕ್ಕಿ ಹೇಳಿದರು. ಸದ್ಯ ದೆಹಲಿಯಲ್ಲಿದ್ದೇನೆ. ನನ್ನನ್ನು ಮತದಾನ ಜಾಗೃತಿಗಾಗಿ ರಾಯಭಾರಿಯನ್ನಾಗಿ ಮಾಡಿರುವುದು ಖುಷಿಯಾಗಿದೆ. ಇನ್ನೆರಡು ದಿನಗಳಲ್ಲಿ ಆಗಮಿಸಿ ಚುನಾವಣೆ ಮುಗಿಯುವವರೆಗೂ ಜಿಲ್ಲಾಡಳಿತ ಹೇಳಿದ್ದಲ್ಲಿ ಮತದಾನ ಜಾಗೃತಿಯಲ್ಲಿ ಪಾಲ್ಗೊಳ್ಳುತ್ತೇನೆ. ಎಲ್ಲರೂ ಮತದಾನ ಮಾಡಬೇಕು. ಅದಕ್ಕಾಗಿ ಶ್ರಮಿಸುತ್ತೇನೆ ಎಂದು ರಾಕೇಶ ನಿಡಗುಂದಿ ತಿಳಿಸಿದರು.