ಪರಮೇಶ್ವರ್‌ ರಾಜೀನಾಮೆ ನೀಡಿ ಹೋರಾಟಕ್ಕೆ ಬನ್ನಿ: ಸುರೇಶ್‌ಗೌಡ

| Published : Dec 09 2024, 12:47 AM IST

ಪರಮೇಶ್ವರ್‌ ರಾಜೀನಾಮೆ ನೀಡಿ ಹೋರಾಟಕ್ಕೆ ಬನ್ನಿ: ಸುರೇಶ್‌ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ರೈತರ ಬದುಕಿಗೆ ಮರಣ ಶಾಸನವಾಗಲಿರುವ ಅವೈಜ್ಞಾನಿಕ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ ನಮ್ಮ ನೀರು-ನಮ್ಮ ಹಕ್ಕು ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್‌ನ ಮಿತ್ರ ಪಕ್ಷಗಳ ನೇತೃತ್ವದಲ್ಲಿ ಗುಬ್ಬಿ ತಾಲೂಕು ಸಾಗರನಹಳ್ಳಿ ಗೇಟ್‌ನಿಂದ ತುಮಕೂರುವರೆಗೆ ನಡೆದ ಪಾದಯಾತ್ರೆ ಯಶಸ್ವಿಯಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯ ರೈತರ ಬದುಕಿಗೆ ಮರಣ ಶಾಸನವಾಗಲಿರುವ ಅವೈಜ್ಞಾನಿಕ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ ನಮ್ಮ ನೀರು-ನಮ್ಮ ಹಕ್ಕು ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್‌ನ ಮಿತ್ರ ಪಕ್ಷಗಳ ನೇತೃತ್ವದಲ್ಲಿ ಗುಬ್ಬಿ ತಾಲೂಕು ಸಾಗರನಹಳ್ಳಿ ಗೇಟ್‌ನಿಂದ ತುಮಕೂರುವರೆಗೆ ನಡೆದ ಪಾದಯಾತ್ರೆ ಯಶಸ್ವಿಯಾಯಿತು.

ವಿವಿಧ ಮಠಾಧೀಶರೊಂದಿಗೆ ರೈತರು ಎರಡೂ ಪಕ್ಷಗಳ ಮುಖಂಡರು ಎರಡು ದಿನಗಳ ಕಾಲ ಪಾದಯಾತ್ರೆಯಲ್ಲಿ ನಡೆದು ಭಾನುವಾರ ತುಮಕೂರು ತಲುಪಿದರು. ಮಹಿಳೆಯರು ಖಾಲಿ ಕೊಡ ಹಿಡಿದು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ತುಮಕೂರಲ್ಲಿ ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ಯಾವುದೇ ಕಾರಣಕ್ಕೂ ಪೈಪ್‌ಲೈನ್ ಮೂಲಕ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ನಮ್ಮ ಹೆಣದ ಮೇಲೆ ನೀರು ತೆಗೆದುಕೊಂಡು ಹೋಗಬೇಕಷ್ಟೇ. ಒಂದು ವೇಳೆ ಈ ಯೋಜನೆ ಜಾರಿಯಾದರೆ ರಕ್ತಪಾತ, ಪ್ರಾಣ ತ್ಯಾಗಕ್ಕೂ ಸಿದ್ಧ. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಷ್ಠೆಯಿಂದ ಜಿಲ್ಲೆಯ ಜನರಿಗೆ ವಿಷ ಉಣಿಸಿ ಈ ಯೋಜನೆ ಜಾರಿ ಮಾಡಲು ಹೊರಟಿದ್ದಾರೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಕಾಂಗ್ರೆಸ್ ಸರ್ಕಾರ ಜಿಲ್ಲೆಯ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ. ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ನಾವು ಯಾವುದಕ್ಕೂ ಬಗ್ಗುವುದಿಲ್ಲ, ಲಾಠಿ ಚಾರ್ಜ್, ಗೋಲಿ ಬಾರ್‌ಗೆ ಹೆದರುವುದಿಲ್ಲ.

ಜಿಲ್ಲೆಯ ಜನರ ನೀರಿನ ಹಕ್ಕನ್ನು ಕಸಿಯುತ್ತಿರುವ ಈ ಸಂದರ್ಭದಲ್ಲೂ ಜಿಲ್ಲೆಯ 7 ಮಂದಿ ಕಾಂಗ್ರೆಸ್ ಶಾಸಕರು ಚಕಾರ ಎತ್ತದಿರುವುದು ವಿಪರ್ಯಾಸ, ಕಾಂಗ್ರೆಸ್ ಶಾಸಕರು, ಸಚಿವರು ಮುಂದೆ ಬಂದು ಜಿಲ್ಲೆಯ ಜನರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಯಾವುದೇ ಕಾರಣಕ್ಕೂ ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ನೀರನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ, ಈಗಿರುವ ನಾಲೆಯ ಮೂಲಕ ಕುಣಿಗಲ್‌ಗೆ ನೀರು ಹರಿಸಲಿ. ಎಕ್ಸ್‌ಪ್ರೆಸ್ ಕೆನಾಲ್ ವಿರುದ್ಧ ಹೋರಾಟ ತೀವ್ರಗೊಳ್ಳಲಿದೆ. ಸೋಮವಾರದಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಎರಡೂ ಪಕ್ಷಗಳ ಮುಖಂಡರು, ಮಠಾಧೀಶರು, ರೈತರು, ಸಂಘಟನೆಗಳು ಪ್ರಮುಖರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಹೇಳಿದರು.

ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ, ಮಾಜಿ ಶಾಸಕ ಮಸಾಲ ಜಯರಾಮ್, ಮುಖಂಡ ದಿಲೀಪ್‌ಕುಮಾರ್, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಎಸ್ಟಿ ಘಟಕ ರಾಜ್ಯ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ, ಬಿಜೆಪಿ ನಗರ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಚೇತನ್, ಓಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ ಸೇರಿದಂತೆ ವಿವಿಧ ಮೋರ್ಚಾಗಳ ಮುಖಂಡರು ಭಾಗವಹಿಸಿದ್ದರು.

ಸಚಿವ ಪರಂ ಮನೆಗೆ ಮುತ್ತಿಗೆ ಯತ್ನ: ತೀವ್ರತೆ ಪಡೆದುಕೊಂಡ ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ವಿರೋಧಿ ಹೋರಾಟದ ಎರಡನೇ ದಿನದ ಪಾದಯಾತ್ರೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಮನೆಗೆ ಮುತ್ತಿಗೆ ಯತ್ನ ಮಾಡಿದ ಘಟನೆ ನಡೆದಿದೆ. ಹೆಗ್ಗೆರೆ ಬಳಿ ಜಿ.ಪರಮೇಶ್ವರ ಮನೆಯಿದ್ದು ದಾರಿ ಮಧ್ಯೆ ಪರಮೇಶ್ವರ ಮನೆಗೆ ನುಗ್ಗಲು ಕೆಲ ಪಾದಯಾತ್ರಿಗಳು ಯತ್ನಿಸಿದರು. ಬಿಜೆಪಿ ಶಾಸಕ ಸುರೇಶ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ ನೇತೃತ್ವದಲ್ಲಿ ಮುತ್ತಿಗೆ ಹಾಕಲು ಯತ್ನಿಸಿದಾಗ ಪಾದಯಾತ್ರಿಗಳನ್ನು ತಡೆದು ವಾಪಸ್ ಕಳುಹಿಸಲಾಯಿತು.

ಕುಣಿಗಲ್‌ಗೆ ನೀರು ಬೀಡುವ ವಿಚಾರದಲ್ಲಿ ತಕರಾರಿಲ್ಲ

ಜಿಲ್ಲೆಯ ರೈತರ, ನಾಗರೀಕರ ನೀರಿನ ಹಕ್ಕಿಗಾಗಿ ಈ ಪಾದಯಾತ್ರೆ ನಡೆದಿದೆ. ರೈತರು, ಸಂಘಸಂಸ್ಥೆಗಳವರು, ಮಿತ್ರ ಪಕ್ಷದವರು ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಕುಣಿಗಲ್‌ಗೆ ಹೇಮಾವತಿ ನೀರು ನೀಡುವ ವಿಚಾರದಲ್ಲಿ ನಮ್ಮ ತಕರಾರಿಲ್ಲ, ಹಾಲಿ ಇರುವ ನಾಲೆಯ ಮೂಲಕ ನೀರನ್ನು ತೆಗೆದುಕೊಂಡು ಹೋಗಲಿ, ಅದರೆ ಬಸ್ ಹೋಗುವ ಗಾತ್ರದ ಪೈಪ್‌ಗಳನ್ನು ಬಳಿಸಿಕೊಂಡು ನೀರನ್ನು ತೆಗೆದುಕೊಂಡು ಹೋಗುವುದನ್ನು ವಿರೋಧಿಸುತ್ತೇವೆ, ಇದಕ್ಕೆ ಅವಕಾಶ ನೀಡುವುದಿಲ್ಲ.

ಜಿ.ಬಿ.ಜ್ಯೋತಿ ಗಣೇಶ್ ಶಾಸಕ

ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಉಗ್ರವಾದ ಹೋರಾಟ; ಜಿಲ್ಲೆಯ ಜನರಿಗೆ ಅನ್ಯಾಯವಾಗುತ್ತಿದ್ದರೂ ಮಾತನಾಡದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಪರಮೇಶ್ವರ್ ಅವರು ರಾಜೀನಾಮೆ ಬಿಸಾಕಿ ಜನರಿಗೆ ನ್ಯಾಯ ನೀಡಲು ಬನ್ನಿ, ಇಲ್ಲವಾದರೆ ನಿಮ್ಮ ಮನೆ ಮುಂದೆ ಹೋರಾಟ ಮಾಡುತ್ತೇವೆ. ಜಿಲ್ಲೆಯಲ್ಲಿರುವ 7 ಮಂದಿ ಕಾಂಗ್ರೆಸ್ ಶಾಸಕರು ಜಿಲ್ಲೆಯ ಜನರೊಂದಿಗೆ ಹೋರಾಟಕ್ಕೆ ಬರಬೇಕು. ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಸುರೇಶ್‌ಗೌಡ ಹೇಳಿದರು.