ಹುಬ್ಬಳ್ಳಿ ಕೊಲೆಗಳ ಬಗ್ಗೆ ವರದಿ ಕೇಳಿದ್ದೇನೆ: ಪರಂ

| Published : May 18 2024, 12:45 AM IST / Updated: May 18 2024, 09:20 AM IST

Dr G Parameshwara

ಸಾರಾಂಶ

ಹುಬ್ಬಳ್ಳಿಯ ಅಂಜಲಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ಲೋಪವೂ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಹುಬ್ಬಳ್ಳಿಯ ಕೊಲೆ ಪ್ರಕರಣಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಎಡಿಜಿಪಿ ಅವರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

 ಬೆಂಗಳೂರು :  ಹುಬ್ಬಳ್ಳಿಯ ಅಂಜಲಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ಲೋಪವೂ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಹುಬ್ಬಳ್ಳಿಯ ಕೊಲೆ ಪ್ರಕರಣಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಎಡಿಜಿಪಿ ಅವರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡದಲ್ಲಿ ಪದೇ ಪದೇ ಇಂತಹ ಘಟನೆಗಳು ಸಂಭವಿಸಲು ಅಸಲಿ ಕಾರಣ ಏನೆಂಬುದನ್ನು ಗುರುತಿಸಿ ಎಡಿಜಿಪಿ ಅವರು ವರದಿ ಸಲ್ಲಿಸಲಿದ್ದಾರೆ. ಈಗಾಗಲೇ ಅಂಜಲಿ ಕೊಲೆ ಆರೋಪಿಯನ್ನು ಬಂಧಿಸಲಾಗಿದ್ದು, ಕಾನೂನು ರೀತ್ಯ ಏನು ಕಠಿಣ ಶಿಕ್ಷೆ ಆಗಬೇಕೋ ಅದನ್ನು ಕೊಡಿಸುತ್ತೇವೆ ಎಂದರು.

ನನ್ನ ಮೊಮ್ಮಗಳಿಗೆ ಜೀವ ಬೆದರಿಕೆ ಇದೆ ಎಂದು ಕೊಲೆಯಾದ ಅಂಜಲಿಯ ಅಜ್ಜಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ದೂರು ನೀಡಿರಲಿಲ್ಲ. ಪೋಷಕರು ಕೂಡ ಪೊಲೀಸರಿಗೆ ಮೊದಲೇ ಮಾಹಿತಿ ನೀಡಿದ್ದೆವು ಎಂದಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಪೊಲೀಸರ ಲೋಪ ಕಂಡು ಬಂದಿದ್ದು ಅವರನ್ನು ಅಮಾನತು ಮಾಡಲಾಗಿದೆ. ಮುಂದೆ ಏನೆಲ್ಲ ಕಾನೂನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.

ಸಂಸದ ಪ್ರಜ್ವಲ್‌ ಪ್ರಕರಣದ ಎಸ್‌ಐಟಿ ವರದಿ ಮಂಡ್ಯ ಶಾಸಕರಿಗೆ ಹೋಗುತ್ತಿದೆ ಎಂಬ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಪರಮೇಶ್ವರ್‌ ಅವರು, ಇಂತಹ ವಿಚಾರವನ್ನು ಸಾರ್ವಜನಿಕ ವಲಯಕ್ಕೆ ತರುವುದು ಸರಿಯಲ್ಲ. ಇದು ಕುಮಾರಸ್ವಾಮಿ ಅವರಿಗೂ ಚೆನ್ನಾಗಿ ಗೊತ್ತಿದೆ. ತನಿಖೆ ನಡೆಯುತ್ತಿದೆ. ಆರೋಪ ಮಾಡುವುದು ಸುಲಭ. ನಮಗೆಲ್ಲ ತುಂಬಾ ಜವಾಬ್ದಾರಿ ಇದೆ. ಎಸ್ಐಟಿ ಸಮರ್ಥವಾಗಿ ಕೆಲಸ ಮಾಡುತ್ತಿದೆ. ನನಗಾಗಲಿ ಅಥವಾ ಮುಖ್ಯಮಂತ್ರಿಯವರಿಗಾಗಲಿ ಯಾವುದನ್ನು ವಿವರಿಸಬೇಕೋ ಅದನ್ನು ಎಸ್ಐಟಿ ಮಾಡುತ್ತದೆ ಎಂದು ಹೇಳಿದರು.

ವಿದೇಶದಿಂದ ಕರೆತರಲು ಪ್ರಯತ್ನ: ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ವಿದೇಶದಿಂದ ಕರೆ ತರುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಬ್ಲೂ-ಕಾರ್ನರ್‌ ನೋಟಿಸ್‌ ಕೂಡ ಹೊರಡಿಸಲಾಗಿದೆ ಎಂದರು.

ಪ್ರಜ್ವಲ್‌ ರೇವಣ್ಣಗೆ ಸರ್ಕಾರ ಸಹಾಯ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹೀಗೆಂದು ‘ಬಿಜೆಪಿ ಮತ್ತು ಜನತಾದಳದವರೂ ಹೇಳುತ್ತಾರೆ. ಸರ್ಕಾರಕ್ಕೆ ಜವಾಬ್ದಾರಿ ಇದೆಯಲ್ಲವೇ? ಸರ್ಕಾರ ಒಳ್ಳೆ ಕೆಲಸ ಮಾಡುತ್ತಿದೆ ಎಂದು ಹೇಳಲು ಅವರಿಗೆ ಸಾಧ್ಯವಿಲ್ಲ. ನಾವು ಮಾಡಬೇಕಾದ ಕೆಲಸ ಮಾಡುತ್ತೇವೆ’ ಎಂದರು.

ವಂಚನೆ ಆರೋಪಿ ಬಂಧನ: ಕೊರಟಗೆರೆ ಕ್ಷೇತ್ರದ ವ್ಯಕ್ತಿ ಎಲ್ಲಿಯೋ ನನ್ನ ಜೊತೆ ಫೋಟೋ ತೆಗೆಸಿಕೊಂಡಿದ್ದ. ಅದನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಜನರಿಂದ ಹಣ ಪಡೆದುಕೊಂಡು ವಂಚಿಸಿದ್ದಾನೆ. ಹೀಗಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಕಾನೂನು‌ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.