ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪರಮೇಶ್ವರಪ್ಪ ಆಯ್ಕೆ

| Published : Sep 05 2024, 12:39 AM IST

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪರಮೇಶ್ವರಪ್ಪ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮ್ಯಾಕ್ಲೂರಹಳ್ಳಿಯಲ್ಲಿ ಸೇವೆ । ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 17 ಆಯ್ಕೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಶಾಲಾ ಶಿಕ್ಷಣ ಇಲಾಖೆಯಿಂದ 2024-25ನೇ ಸಾಲಿನ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನೀಡಲಾಗುವ ಉತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು, ಜಿಲ್ಲೆಯಿಂದ ಹಿರಿಯೂರು ತಾಲೂಕಿನ ಆರ್.ಟಿ ಪರಮೇಶ್ವರಪ್ಪ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಾಲೂಕಿನ ಮ್ಯಾಕ್ಲೂರಹಳ್ಳಿ ಹೊಸಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಪರಮೇಶ್ವರಪ್ಪಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಮೂಲತಃ ಹಿರಿಯೂರು ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ಜನಿಸಿದ ಪರಮೇಶ್ವರಪ್ಪ ಪಿಯುಸಿ ಟಿಸಿಎಚ್ ಶಿಕ್ಷಣ ಮುಗಿಸಿ 1998ರಲ್ಲಿ ಶಿಕ್ಷಕ ವೃತ್ತಿಗೆ ಸೇರಿಕೊಂಡರು. ಮೊದಲ ಬಾರಿಗೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಚಿನ್ನಹಳ್ಳಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ, ನಂತರ ತಾಲೂಕಿಗೆ ವರ್ಗಾವಣೆಗೊಂಡು 2022ರಲ್ಲಿ ಸೂರಪ್ಪನಹಟ್ಟಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಜಡೆಗೊಂಡನಹಳ್ಳಿ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾದರು‌. ಈ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಅರಣ್ಯ ಇಲಾಖೆಯಿಂದ ಪರಿಸರ ಮಿತ್ರ ಎಂಬ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದೀಗ ಮ್ಯಾಕ್ಲೂರಹಳ್ಳಿಯ ಹೊಸಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, 2025 ಜೂನ್ ತಿಂಗಳಲ್ಲಿ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

ಜಿಲ್ಲಾ ಮಟ್ಟದ ಪ್ರಶಸ್ತಿಗೆ ತಾಲೂಕಿನ ಕಾಟನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀನಿವಾಸ್ ಹಾಗೂ ಕಾಟನಾಯಕನಹಳ್ಳಿ ಗೊಲ್ಲರಹಟ್ಟಿ ಶಾಲೆಯ ಸುನೀಲ್ ಕುಮಾರ್ ಆಯ್ಕೆಯಾಗಿದ್ದಾರೆ.

ತಾಲೂಕು ಮಟ್ಟದ ಪ್ರಶಸ್ತಿಗೆ ಆಯ್ಕೆ: 2024-25ನೇ ಸಾಲಿನ ಶಿಕ್ಷಕರ ದಿನಾಚರಣೆ ಪ್ರಯುಕ್ತ ನೀಡಲಾಗುವ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲೂಕಿನಿಂದ 17 ಶಿಕ್ಷಕರು ಆಯ್ಕೆಯಾಗಿದ್ದಾರೆ. ಮಾಳಗೊಂಡನಹಳ್ಳಿಯ ಸಹಿಪ್ರಾ ಶಾಲೆಯ ಸಿ.ಜಯಮ್ಮ, ಯಲ್ಲದಕೆರೆ ಶಾಲೆಯ ಜಯಮಾಲಾ, ಸೂರಪ್ಪನಹಟ್ಟಿ ಶಾಲೆಯ ವೇಣುಗೋಪಾಲಚಾರಿ, ಶಿವಪುರದ ಶಾಲೆಯ ಪಿ.ಎಸ್. ಶಿವಕುಮಾರಿ, ಭೂತಯ್ಯನಹಟ್ಟಿ ಶಾಲೆಯ ಶೇಕ್ ಬಷೀರ್ ಅಹಮದ್, ಗುಯಿಲಾಳು ಶಾಲೆಯ ಎಚ್.ಎನ್. ಸುಜಾತಾ, ಹರಿಯಬ್ಬೆ ಪಾಳ್ಯ ಶಾಲೆಯ ವಿ. ನಾಗರತ್ನಮ್ಮ, ಬಿದರಕೆರೆ ಶಾಲೆಯ ಸಿ. ಪವಿತ್ರ, ಧರ್ಮಪುರ ಶಾಲೆಯ ಬಿ.ರತ್ನಮ್ಮ, ಮಲ್ಲೇಣು ಶಾಲೆಯ ಸಿ.ಕರಿಯಪ್ಪ, ಕೆಆರ್.ಪುರ ಶಾಲೆಯ ಎಚ್. ಕೃಷ್ಣಮೂರ್ತಿ, ನಗರದ ಬಸ್ ನಿಲ್ದಾಣ ಶಾಲೆಯ ಅನುಸೂಯಮ್ಮರವರು ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಣ ವಿಭಾಗದಲ್ಲಿ ಪಾಲವ್ವನಹಳ್ಳಿಯ ಶಾಲೆಯ ಕಮಲಮ್ಮ, ಅಜಾದ್ ನಗರದ ಉರ್ದು ಸಹ ಶಿಕ್ಷಕಿ ಶಾಹೀದಾ ಬಾನು, ಪಾಲವ್ವನಹಳ್ಳಿ ಶಾಲೆಯ ಉರ್ದು ಸಹ ಶಿಕ್ಷಕಿ ನರ್ಗಿಸ್ ಬಾನು ಹಾಗೂ ನೆಹರೂ ಮೈದಾನದ ಶಾಲೆಯ ಕನ್ನಡ ಶಿಕ್ಷಕಿ ಚಂದ್ರಕಲಾ ಅವರಿಗೆ ಉತ್ತಮ ಶಿಕ್ಷಕರ ಪ್ರಶಸ್ತಿ ಲಭಿಸಿವೆ.