ಕನಕಗಿರಿ: ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಮಕ್ಕಳಲ್ಲಿ ಗುಂಪುಗಾರಿಕೆ ಸೃಷ್ಟಿಸಿ, ಶಾಲೆಯ ವಾತಾವರಣ ಹಾಳು ಮಾಡುತ್ತಿರುವ ಆರೋಪ ಪಟ್ಟಣದ ಪರಿಶಿಷ್ಟ ಜಾತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೇಳಿ ಬಂದಿದೆ.

ಈ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಾಬು ನಡಲಮನಿ ಅವರು ಹಲವು ತಿಂಗಳಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಇಲ್ಲಸಲ್ಲದ್ದನ್ನು ಹೇಳಿ ಗುಂಪುಗಾರಿಕೆ ಮಾಡಿಸುತ್ತಿದ್ದಾರೆ. ಈ ಬಗ್ಗೆ ಪ್ರಾಂಶುಪಾಲರಿಗೆ ಮಾಹಿತಿ ಇದ್ದರೂ ಶಾಲೆಯ ವಾತಾವರಣ ಹದಗೆಡಬಾರದು ಎನ್ನುವ ಕಾರಣ ಸುಮ್ಮನಿದ್ದಾರೆ. ಚಿಕ್ಕಮಕ್ಕಳಲ್ಲಿ ವಿಷಬೀಜ ಬಿತ್ತಿ ಶಾಲೆಯ ವಾತಾವರಣ ಹಾಳು ಮಾಡುವುದು, ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಶಾಲಾ ಆವರಣದಲ್ಲಿನ ವಿದ್ಯುತ್ ಬಲ್ಬ್‌ ಒಡೆಯುವುದು ಹೀಗೆ ನಾನಾ ಕೃತ್ಯ ಎಸಗಿ ಶಾಲೆಗೆ ಅಗೌರವ ತಂದಿರುವ ದೈಹಿಕ ಶಿಕ್ಷಣ ಶಿಕ್ಷಕ ಬಾಬು ನಡಲಮನಿ ಅವರ ಮೇಲೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಪಾಮಣ್ಣ ಅರಳಿಗನೂರು ಆಗ್ರಹಿಸಿದರು.

ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಆರೋಪದ ವಿಚಾರವಾಗಿ ಶಾಲೆಗೆ ಬಂದಿದ್ದ ಪಾಲಕರು ದೈಹಿಕ ಶಿಕ್ಷಣ ಶಿಕ್ಷಕನ ನಡೆ ಖಂಡಿಸಿದರು. ಮಕ್ಕಳ ಮನಸ್ಸು ಹಾಗೂ ಶಾಲಾ ವಾತಾವರಣ ಹದಗೆಡಲು ಬಾಬು ಕಾರಣರಾಗಿದ್ದು, ಇಂತಹ ವಿಕೃತಿ ಮನಸ್ಸುಳ್ಳ ಶಿಕ್ಷಕನ ವಿರುದ್ಧ ಕ್ರಮವಾಗಬೇಕು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ ಒತ್ತಾಯಿಸಿದ್ದಾರೆ.

ಶಾಲಾ ಸಂಸತ್ ರಚನೆ ಸಂಬಂಧವಾಗಿ ಮಕ್ಕಳ ನಡುವೆ ಆಗಿರುವ ಸಣ್ಣ ಘಟನೆ ದೊಡ್ಡದಾಗಿರುವುದಕ್ಕೆ ಬೇಸರ ತರಿಸಿದೆ. ಶಾಲೆಯಲ್ಲಿ ಕೆಲ ಸಮಸ್ಯೆಗಳಿದ್ದು, ಅವುಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಪ್ರಾಂಶುಪಾಲ ರಾಜು ಮಡ್ಡಿ ತಿಳಿಸಿದ್ದಾರೆ.