ಎಸ್. ಜಾನಕಿ ಹೆಸರು ಪ್ರತಿಯೊಂದು ಮನೆ-ಮನದಲ್ಲೂ ಶಾಶ್ವತವಾಗಿ ಉಳಿದಿದೆ.

ಕುಷ್ಟಗಿ: ಭಾರತೀಯ ಚಿತ್ರರಂಗದ ಹೆಮ್ಮೆಯ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್.ಜಾನಕಿ ನಿಧನದ ಹಿನ್ನೆಲೆಯಲ್ಲಿ ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನುಡಿನಮನ ಕಾರ್ಯಕ್ರಮ ನಡೆಯಿತು.

ಸಂಗೀತ ಕ್ಷೇತ್ರಕ್ಕೆ ಅವರು ನೀಡಿರುವ ಅಪಾರ ಕೊಡುಗೆ, ಸರಳ ವ್ಯಕ್ತಿತ್ವ, ಅಪರೂಪದ ಗಾಯನ ಪ್ರತಿಭೆ ಹಾಗೂ ಭಾರತೀಯ ಸಂಗೀತ ಲೋಕದಲ್ಲಿ ಅವರು ನಿರ್ಮಿಸಿರುವ ಅಳಿಸಲಾಗದ ಛಾಪನ್ನು ಕಾರ್ಯಕ್ರಮದಲ್ಲಿ ಗಣ್ಯರು ಸ್ಮರಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರಗೌಡ ಮಾಲಿಪಾಟೀಲ ಮಾತನಾಡಿ, ಎಸ್. ಜಾನಕಿ ಹೆಸರು ಪ್ರತಿಯೊಂದು ಮನೆ-ಮನದಲ್ಲೂ ಶಾಶ್ವತವಾಗಿ ಉಳಿದಿದೆ. ಸುಮಾರು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ವಿವಿಧ ಭಾಷೆಗಳಲ್ಲಿ ಹಾಡುವ ಮೂಲಕ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಅಪೂರ್ವ ದಾಖಲೆ ನಿರ್ಮಿಸಿದ್ದಾರೆ. ಅವರ ಪ್ರತಿಯೊಂದು ಹಾಡು ಇಂದಿಗೂ ಹೊಸತನ ಕಳೆದುಕೊಳ್ಳದೆ ಸಂಗೀತ ಪ್ರಿಯರ ಮನಸ್ಸನ್ನು ಸೆಳೆಯುತ್ತಿದೆ ಎಂದ ಅವರು,ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಪಡೆದ ಅವರು ನಮ್ಮೆಲ್ಲರ ಹೆಮ್ಮೆಯ ಗಾಯಕಿಯಾಗಿದ್ದರು ಎಂದರು.

ಹಿರಿಯ ಜಾನಪದ ಕಲಾವಿದ ಶರಣಪ್ಪ ವಡಗೇರಿ ಮಾತನಾಡಿ, ಎಸ್.ಜಾನಕಿ ಅಗಲಿಕೆಯಿಂದ ಸಾರಸ್ವತ ಮತ್ತು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.ಕಲಾವಿದರು ದೈಹಿಕವಾಗಿ ನಮ್ಮನ್ನು ಅಗಲಬಹುದು, ಆದರೆ ಅವರ ಕಲೆ ಎಂದಿಗೂ ಜೀವಂತವಾಗಿರುತ್ತದೆ. ಅನೇಕ ಭಾಷೆಗಳಲ್ಲಿ ಅವರು ಹಾಡಿರುವ ಹಾಡು ಮುಂದಿನ ಹಲವು ಪೀಳಿಗೆಗಳಿಗೂ ಪ್ರೇರಣೆಯಾಗಲಿವೆ ಎಂದು ಹೇಳಿದರು.

ಹಿರಿಯ ಸಾಹಿತಿ ಹನಮಂತಪ್ಪ ಈಟಿ ಮಾತನಾಡಿ, ತಮ್ಮ ಸಿರಿಕಂಠದಿಂದ ಗಾನಕೋಗಿಲೆ ಎಂಬ ಬಿರುದಿಗೆ ಪಾತ್ರರಾದ ಎಸ್.ಜಾನಕಿ ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ಹಲವಾರು ಪ್ರತಿಷ್ಠಿತ ಪ್ರಶಸ್ತಿ ತಮ್ಮದಾಗಿಸಿಕೊಂಡ ಅವರು ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರರಂಗ ಶ್ರೀಮಂತಗೊಳಿಸಿದ್ದಾರೆ ಎಂದರು.

ಹಿರಿಯ ಶಿಕ್ಷಕ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಆಂಧ್ರ ಪ್ರದೇಶದಲ್ಲಿ ಜನಿಸಿದ ಎಸ್. ಜಾನಕಿ ತಮ್ಮ ಅಪೂರ್ವ ಪ್ರತಿಭೆಯಿಂದ ಇಡೀ ದೇಶಕ್ಕೆ ಕೀರ್ತಿ ತಂದರು ಎಂದರು.

ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಟರಾಜ ಸೋನಾರ ಮಾತನಾಡಿ, ಎಸ್.ಜಾನಕಿ ಭಾರತೀಯ ಚಿತ್ರರಂಗದಲ್ಲಿ ಅಜರಾಮರ ಹೆಸರಾಗಿ ಉಳಿದಿದ್ದಾರೆ.ಇಂದಿನ ಗ್ಲಾಮರ್ ಯುಗದಲ್ಲಿಯೂ ಅವರ ಗಾಯನಕ್ಕೆ ಇರುವ ಮೌಲ್ಯ ಕಡಿಮೆಯಾಗಿಲ್ಲ. 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ವಿಶ್ವದ ಅಪರೂಪದ ಗಾಯಕಿಯರಲ್ಲಿ ಒಬ್ಬರಾಗಿದ್ದಾರೆ. ಅವರ ಗಾಯನ ಮತ್ತು ಸಾಧನೆ ಯುವ ಗಾಯಕರಿಗೆ ಸದಾ ಮಾರ್ಗದರ್ಶನವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೆಂಕಪ್ಪ ವಾಲಿಕಾರ, ಎಸ್. ಜಾನಕಿ ತಮ್ಮ ಇಡೀ ಬದುಕನ್ನೇ ಸಂಗೀತಕ್ಕೆ ಸಮರ್ಪಿಸಿದ ಅಪರೂಪದ ಸಾಧಕಿ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಕಸಾಪ ಪ್ರಮುಖರಾದ ದೇವರಾಜ ವಿಶ್ವಕರ್ಮ, ಇಮಾಮ್ಸಾಬ ಗರಡಿಮನಿ, ಶರಣಪ್ಪ ಲೈನದ, ಪವಾಡೆಪ್ಪ ಚೌಡ್ಕಿ, ಮೋಹನ್ ಲಾಲ್ ಜೈನ್, ಬುಡ್ನೇಸಾಬ ಕಲಾದಗಿ, ಮಾರುತಿ ಗುಮಗೇರಿ, ಪರಶಿವಮೂರ್ತಿ ಮಾಟಲದಿನ್ನಿ, ಬಸವರಾಜ್ ಗಾಣಿಗೇರ ಸೇರಿದಂತೆ ಸಾಹಿತ್ಯಾಸಕ್ತರು, ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು.