ತಂದೆ-ತಾಯಿ ನಮ್ಮ ಬದುಕಿನ ನಿಜವಾದ ಆದರ್ಶ: ಜೀವನ್‌ರಾಮ್ ಸುಳ್ಯ

| Published : Sep 06 2025, 01:01 AM IST

ಸಾರಾಂಶ

ಆಳ್ವಾಸ್ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ಗುರುವಾರ ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾಸಂಘ, ಸಾಹಿತ್ಯ ಸಂಘ ಮತ್ತು ಮತದಾರರ ಸಾಕ್ಷರತಾ ಸಂಘಗಳ ಈ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ತಂದೆ-ತಾಯಿ ನಮ್ಮ ಬದುಕಿನ ನಿಜವಾದ ಆದರ್ಶ. ತಮ್ಮ ಸಂತೋಷವನ್ನೆಲ್ಲ ತ್ಯಾಗ ಮಾಡಿ ಮಕ್ಕಳ ಭವಿಷ್ಯ ನಿರ್ಮಿಸಲು ಶ್ರಮಿಸುತ್ತಾರೆ. ಅವರ ಕಷ್ಟ ಅರಿತು, ಶಿಕ್ಷಕರ ಮಾರ್ಗದರ್ಶನ ಅನುಸರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ ಕರೆ ನೀಡಿದ್ದಾರೆ.

ಇಲ್ಲಿನ ಶಿವರಾಮ ಕಾರಂತ ವೇದಿಕೆಯಲ್ಲಿ ಗುರುವಾರ ನಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾಸಂಘ, ಸಾಹಿತ್ಯ ಸಂಘ ಮತ್ತು ಮತದಾರರ ಸಾಕ್ಷರತಾ ಸಂಘಗಳ ಈ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಮ್ಮದ್ ಸದಾಕತ್, ಅವಕಾಶಗಳು ಎಲ್ಲರಿಗೂ ದೊರೆಯುತ್ತವೆ. ಆದರೆ ಅವುಗಳನ್ನು ಆಸಕ್ತಿಗೆ ತಕ್ಕಂತೆ ಬಳಸಿಕೊಂಡು ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿದಾಗ ಮಾತ್ರ ನಿಜವಾದ ಯಶಸ್ಸು ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಇಂತಹ ವಿಫುಲ ಅವಕಾಶಗಳನ್ನು ಕಲ್ಪಿಸಿರುವುದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರ ದೂರದೃಷ್ಟಿಯ ಫಲ ಎಂದರು.ಉಪಪ್ರಾಂಶುಪಾಲೆ ಜಾನ್ಸಿ ಪಿ.ಎನ್, ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ, ಸಂಯೋಜಕರಾದ ದಾಮೋದರ್, ಸುನಿಲ್ ಹಾಗೂ ಶ್ವೇತಶ್ರೀ ಇದ್ದರು. ವಿದ್ಯಾರ್ಥಿ ಹೇಮಂತ್ ನಿರೂಪಿಸಿದರು. ಜ್ಯೋತಿ ಸ್ವಾಗತಿಸಿದರು. ಅನನ್ಯ ವಂದಿಸಿದರು.