ಸಾರಾಂಶ
ನರೇಗಲ್ಲ: ಮಕ್ಕಳಿಗೆ ಸಂಸ್ಕಾರದೊಂದಿಗೆ ಶಿಕ್ಷಣ ನೀಡುವ ಕಾರ್ಯ ಮನೆಯಿಂದಲೇ ಪ್ರಾರಂಭಿಸಬೇಕು. ಮನೆಯ ವಾತಾವರಣ ಮಕ್ಕಳ ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳ ಕಲಿಕೆ ಹಾಗೂ ಪ್ರತಿಭೆಗೆ ಪ್ರೋತ್ಸಾಹಿಸಬೇಕು ಎಂದು ಹಾಲಕೆರೆ ಅನ್ನದಾನೇಶ್ವರ ಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಸ್ಥಳೀಯ ಬಸವೇಶ್ವರ ಸಿ.ಬಿನ್.ಎಸ್.ಸಿ ಶಾಲೆಯಲ್ಲಿ ನಡೆದ 12ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಮಕ್ಕಳಿಗೆ ಶಿಕ್ಷಣದ ಜತೆಗೆ ಅವರಲ್ಲಿ ಹುದುಗಿರುವ ಪ್ರತಿಭೆ ಶಿಕ್ಷಕರು ಗುರುತಿಸಿ ಅದನ್ನು ಹೊರತರುವ ಪ್ರಯತ್ನ ನಿರಂತರ ಮಾಡಬೇಕು. ಈಗಾಗಲೇ ನಮ್ಮ ಸಂಸ್ಥೆಯಲ್ಲಿ ಅಧ್ಯಯನ ಮಾಡಿರುವ ವಿದ್ಯಾಥಿಗಳು ದೊಡ್ಡದೊಡ್ಡ ಹುದ್ದೆಯಲ್ಲಿದ್ದು, ಅದಕ್ಕೆಲ್ಲ ಹಿರಿಯ ಅನ್ನದಾನ ಶ್ರೀಗಳ, ಅಭಿನವ ಅನ್ನದಾನ ಶ್ರೀಗಳ ಆಶೀರ್ವಾದವೇ ಕಾರಣ. ಇಲ್ಲಿರುವ ಶಿಕ್ಷಕರು ಶಾಲಾ ಪರಿಸರದಲ್ಲಿ ಮಕ್ಕಳೊಂದಿಗೆ ಸಂಪೂರ್ಣ ಇಂಗ್ಲಿಷನಲ್ಲಿ ಮಾತನಾಡುವುದರ ಜತೆಗೆ ಅವರನ್ನು ಆ ನಿಟ್ಟಿನಲ್ಲಿ ಬೆರೆಯುವಂತೆ ಮಾಡಿ,ನಮ್ಮ ಮಾತೃಭಾಷೆ ಕನ್ನಡ ನಾವೆಲ್ಲ ಕನ್ನಡಿಗರು ಆದರೆ ವ್ಯವಹಾರಿಕವಾಗಿ ಜಗತ್ತಿನೊಂದಿಗೆ ಭವಿಷ್ಯತ್ತಿನಲ್ಲಿ ಮುಂದುವರಿಯಲು ಆಂಗ್ಲ ಭಾಷೆ ಬೇಕಾಗುತ್ತದೆ ಎಂದರು.
ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದ ಪ್ರಾ.ವೈ.ಸಿ. ಪಾಟೀಲ ಮಾತನಾಡಿ, ಶಾಲಾ ವಾತಾವರಣ ಮಕ್ಕಳನ್ನು ಕಲಿಕೆಗೆ ಪ್ರಚೋದಿಸುವಂತಿರಬೇಕು. ಪ್ರತಿಯೊಬ್ಬ ಶಿಕ್ಷಕರು ಮಕ್ಕಳನ್ನು ಹಸನ್ಮುಖಿಯಾಗಿ ನಗು ನಗುತ್ತಾ ಮಗುವಿನೊಂದಿಗೆ ಬೇರೆಯಬೇಕು. ಪ್ರೀತಿಗೆ ಮಕ್ಕಳು ಖಂಡಿತ ತಲೆಬಾಗುತ್ತಾರೆ. ಈ ಶಿಕ್ಷಣ ಸಂಸ್ಥೆ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿರುವ ಪ್ರತಿಯೊಬ್ಬ ಶಿಕ್ಷಕರು ತಮ್ಮ ತಮ್ಮ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆಂದು ತಿಳಿಸಿದರು.ಈ ವೇಳೆ ಬಸವೇಶ್ವರ ಕನ್ನಡ ಮಾದ್ಯಮ ಶಾಲೆಯ ಚೇರಮನ್ ಡಾ.ಜಿ.ಕೆ.ಕಾಳೆ ಮಾತನಾಡಿದರು. ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾ ಸಂಪನ್ನರನ್ನು,ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಮಲ್ಲಿಕಾರ್ಜುನಪ್ಪ ಮೆಣಸಗಿ, ವಿ.ಬಿ. ಸೋಮನಕಟ್ಟಿಮಠ, ಪ್ರಾ. ಬಿ.ಎಚ್. ಬಂಡಿಹಾಳ ಹಾಗೂ ಮುಂತಾದವರು ಇದ್ದರು.