ಪಾಲಕರು ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಿ: ದಿವಾಣ ಭಟ್‌

| Published : May 13 2024, 12:00 AM IST

ಸಾರಾಂಶ

ಸಂಘ, ಸಂಸ್ಥೆಗಳ ಶಿಬಿರದಲ್ಲಿ ಬಿತ್ತಿದ ಕಲೆಯ ಬೀಜ ಮರವಾಗಿ ಬೆಳೆಯಲು ಪಾಲಕರ ಸಹಕಾರ ಅತೀ ಮುಖ್ಯ ಎಂದು ಅನನ್ಯ ಫೀಡ್ಸ್ ನ ಸ್ಥಾಪಕ ದಿವಾಣ ಭಟ್ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಪಾಲಕರು ಮಕ್ಕಳಲ್ಲಿ ಅಡಕವಾಗಿರುವ ಪ್ರತಿಭೆಗೆ ಸೂಕ್ತ ಪೋತ್ಸಾಹ ನೀಡುವ ಕಾರ್ಯವಾಗಲಿ ಎಂದು ಅನನ್ಯ ಫೀಡ್ಸ್ ನ ಸ್ಥಾಪಕ ದಿವಾಣ ಭಟ್ ಹೇಳಿದರು.

ಅವರು ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಾಕಾರ ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರತಿಷ್ಠಾನ ಅಯೋಜಿಸಿದ್ದ ಮಕ್ಕಳ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಸಂಘ, ಸಂಸ್ಥೆಗಳ ಶಿಬಿರದಲ್ಲಿ ಬಿತ್ತಿದ ಕಲೆಯ ಬೀಜ ಮರವಾಗಿ ಬೆಳೆಯಲು ಪಾಲಕರ ಸಹಕಾರ ಅತೀ ಮುಖ್ಯ. ಸಾಕಾರದಂತ ಸಂಸ್ಥೆಗಳು ಯಕ್ಷಗಾನದಂತಹ ಕಲೆಗಳ ಬೀಜವನ್ನು ಕಳೆದ ಹತ್ತು ವರ್ಷದಿಂದ ಶಿಬಿರ ಏರ್ಪಡಿಸುವುದರ ಮೂಲಕ ಬಿತ್ತಿದ್ದಾರೆ. ಅದು ಮರವಾಗಿ ಬೆಳೆಯಬೇಕಾದರೆ ತಂದೆ, ತಾಯಿಗಳು ಆ ಮಕ್ಕಳಲ್ಲಿರುವ ಆಸಕ್ತಿಗೆ ಪ್ರೋತ್ಸಾಹ ನೀಡುವುದು ಸಹ ಅಷ್ಟೇ ಮುಖ್ಯ ಎಂದರು.

ಯಕ್ಷಗಾನ ಅಪ್ಪಟ ಕನ್ನಡ ಕಲೆಯಾಗಿದ್ದು, ನೃತ್ಯ, ಸಂಗೀತ, ಸಾಹಿತ್ಯ, ನಾಟಕ ಹೀಗೆ ಎಲ್ಲ ಕಲಾ ಪ್ರಕಾರಗಳನ್ನು ಒಳಗೊಂಡ ಶ್ರೀಮಂತ ಕಲೆಯಾಗಿದೆ. ಈ ಕಲೆಗೆ ಅಪಾರ ಮನ್ನಣೆ ಇದ್ದು ಮಕ್ಕಳು ಹೆಚ್ಚಿನ ಸಾಧನೆ ಮಾಡುವಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಲಿ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಸದ್ಯೋಜಾತ ಕಲಾ ಕೇಂದ್ರದ ಸಂಸ್ಥಾಪಕ ಸುರೇಶ ಭಟ್ ಮಾತನಾಡಿದರು. ನಂತರ ಶಿಬಿರದಲ್ಲಿ ಭಾಗವಹಿಸಿದ 27 ಮಕ್ಕಳಿಂದ ಪ್ರದರ್ಶನಗೊಂಡ ಚಕ್ರವ್ಯೂಹ- ಸೈಂಧವ ವಧೆ ಯಕ್ಷಗಾನ ಪ್ರಸಂಗ ಕಲಾಪ್ರಿಯರ ಮನಸೂರೆಗೊಂಡಿತು. ಅಭಿಮನ್ಯುವಾಗಿ ತನ್ನ ವಯಸ್ಸಿಗೂ ಮೀರಿದ ಅಭಿನಯ, ಮಾತುಗಾರಿಕೆ, ಕುಣಿತ ನೀಡಿದ ಸಾನಿಧ್ಯ, ಕೃಷ್ಣನಾಗಿ ಮನೋಜ್ಞ ಅಭಿನಯ, ಮಾತುಗಾರಿಕೆ, ಕುಣಿತ ನೀಡಿದ ಶೀತಲ್ ಹಾಗೂ ಕೌರವನಾಗಿ ಪ್ರಬುದ್ಧ ಅಭಿನಯ, ಕುಣಿತ, ಮಾತುಗಾರಿಕೆಯಲ್ಲಿ ಮಿಂಚಿದ ಸುಜನಿ ಹಾಗೂ ಭಾಗವಹಿಸಿದ ಎಲ್ಲ ಮಕ್ಕಳೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದರು.

ಭಾಗವತಿಕೆಯಲ್ಲಿ ಗುರು ಪರಮೇಶ್ವರ ಹೆಗಡೆ‌ ಐನಬೈಲು‌. ಮಂಜುನಾಥ ಹೆಗಡೆ ಧಾರವಾಡ, ಶಿಬಿರದ ಸಂಚಾಲಕಿಯಾಗಿ ಶಶಿಕಲಾ ಜೋಶಿ, ಮದ್ದಳೆಯಲ್ಲಿ ಶ್ರೀಪಾದ ಭಟ್ ಮೂಡುಗಾರು, ಚಂಡೆಯಲ್ಲಿ ನಾರಾಯಣ ಕೊಮಾರ, ಯಲ್ಲಾಪುರ ಹಾಗೂ ಅದಿತಿ ಎಸ್. ಧಾರವಾಡ, ವೇಷಭೂಷಣದಲ್ಲಿ ವಿನಯ ಭಟ್ ಕೋಳಿಗಾರು ಮತ್ತು ಸಂಗಡಿಗರು ಸಹಕರಿಸಿದರು.

ಪ್ರಕಾಶ ಭಟ್, ವಿದುಷಿ ಸವಿತಾ ಹೆಗಡೆ, ಎನ್. ಭಾಸ್ಕರ, ನಿವೃತ್ತ ಪ್ರೊ. ರವೀಂದ್ರ, ಡಾ. ಸುನೀಲ, ಡಾ. ಶರ್ಮಿಳಾ, ಅನಿತಾ ಪುರಾಣಿಕ್, ಶಾರದಾ ದಾಬಡೆ, ನರಸಿಂಹ ಸ್ವಾಮಿ ಸೇರಿದಂತೆ ಹಲವರಿದ್ದರು. ಡಾ. ಶುಭದಾ ಸ್ವಾಗತಿಸಿದರು. ಶಶಿಕಲಾ ಜೋಶಿ ವಂದಿಸಿದರು.