ಮಕ್ಕಳು ಶೈಕ್ಷಣಿಕ ಹಂತದಲ್ಲಿ ಕಾನೂನು ಅರಿವು ಪಡೆದು ಕೊಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡಿದರೆ ಪೋಷಕರಿಗೆ ಜೈಲು ಶಿಕ್ಷೆ ಮತ್ತು ದಂಡ ಕಟ್ಟಿಟ್ಟ ಬುತ್ತಿ ಎಂದು ಜೆಎಂಎಫ್‌ಸಿ ನ್ಯಾಯಾಲಯದ 1 ನೇ ಅಪರ ಸಿವಿಲ್ ನ್ಯಾಯಾಧೀಶ ಕೆ.ಗೋಪಾಲಕೃಷ್ಣ ಎಚ್ಚರಿಸಿದರು.ಪಟ್ಟಣದ ಶಿವಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಹಾಗೂ ದೇಯೋದ್ದೇಶಗಳ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು 18 ವರ್ಷ ದಾಟಿದ ನಂತರ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡು ನಂತರ ವಾಹನ ಚಾಲನೆ ಮಾಡಬೇಕು. ಇಲ್ಲವಾದಲ್ಲಿ ಅಪಘಾತ ಸಂದರ್ಭದಲ್ಲಿ ಮೃತಪಟ್ಟ ಅಥವಾ ಗಾಯಗೊಂಡವರಿಗೆ ವಿಮೆ ಕಂಪನಿ ಪರಿಹಾರ ನೀಡುವುದಿಲ್ಲ. ಹೀಗಾಗಿ ಪೋಷಕರಿಗೆ ಜೈಲು ಶಿಕ್ಷೆಯೊಂದಿಗೆ ಲಕ್ಷಾಂತರ ರು. ಪರಿಹಾರ ನೀಡಬೇಕಾದ ಸಂದರ್ಭದಲ್ಲಿ ತಮ್ಮ ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬೀಳುವಂತಹ ಪರಿಸ್ಥಿತಿ ಎದುರಾಗಬಹುದು ಎಂದರು.

ಮಕ್ಕಳು ಶೈಕ್ಷಣಿಕ ಹಂತದಲ್ಲಿ ಕಾನೂನು ಅರಿವು ಪಡೆದು ಕೊಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದರು.

ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಕಪನಿ ನಂಜೇಶ್ವರ ಮಾತನಾಡಿ, ಮಕ್ಕಳು ಮೋಜಿನಾಟಕ್ಕೆ ಬಲಿಯಾಗಿ ದ್ವಿಚಕ್ರ ವಾಹನದಲ್ಲಿ ಮೂರು ಜನ ಕೂರುವುದು, ವೀಲಿಂಗ್ ಮಾಡುವುದು ಅಪರಾಧವಾಗಿದೆ. ಇದಕ್ಕೆ ನ್ಯಾಯಾಲಯದಲ್ಲಿ 25 ಸಾವಿರ ದಂಡ ಪಾವತಿಸಬೇಕಾಗುತ್ತದೆ. ಜನನ-ಮರಣ ಕಾಯ್ದೆ ಅಡಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು ಕಾನೂನು ಕಾಯ್ದೆಗಳಿಗೆ ಗೌರವ ನೀಡಬೇಕು ಎಂದರು.

ಕಾನೂನು ಸಲಹೆ ಗಾರ್ತಿ ವಿಲಾಸಿನಿ ಸಂಪನ್ಮೂಲ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ವಿ.ಕೆ.ಆನಂದ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ಕಾರ್ಯದರ್ಶಿ ಎಂ.ಜೆ.ಸುಮಂತ್ ಹಾಗೂ ಕಾಲೇಜಿನ ಪ್ರಾಧ್ಯಾಪಕ ವರ್ಗದವರು ಭಾಗವಹಿಸಿದ್ದರು.