ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಪೋಷಕರು ಮಕ್ಕಳ ಬಗ್ಗೆ ಕಾಳಜಿ ಮರೆಯುತ್ತ ಅವರು ಅಡ್ಡದಾರಿ ಹಿಡಿಯಲು ಕಾರಣರಾಗುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ವಿಷಾದಿಸಿದರು.

ರಾಯಲ್ ಪಬ್ಲಿಕ್ ಸ್ಕೂಲ್ ವತಿಯಿಂದ ಆಯೋಜಿಸಿದ್ದ ರಾಯಲ್ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಪೋಷಕರು ತಮ್ಮ ಮಕ್ಕಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪೋಷಕರು ಮನೆಯಲ್ಲಿ ಮಕ್ಕಳಿಗೆ ಜೀವನ, ಭಾವನಾತ್ಮಕ, ಪ್ರೀತಿ, ಕಾಳಜಿ, ಸಮಯ, ಮೌಲ್ಯದ ಪಾಠ ಕಲಿಸಬೇಕು. ಬಳಿಕ ಶಾಲೆಯಲ್ಲಿ ಪಠ್ಯವನ್ನು ಕಲಿತು ಸಂಸ್ಕಾರವಂತರಾಗುತ್ತಾರೆ ಎಂದು ಕಿವಿಮಾತು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ದೂರಹಾಕಿ ಓದಿನ ಕಡೆಗೆ ಗಮನ ಹರಿಸಬೇಕೆಂದು ಕರೆ ನೀಡಿದರು.


ಇತ್ತೀಚೆಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಸಾಮಾನ್ಯ. ಸಮಾಜದಲ್ಲಿ ಸಾಧನೆ ಮಾಡಲು ಹಲವು ಅವಕಾಶಗಳಿವೆ. ತಮಗೆ ಇಷ್ಟ ಬಂದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ನಿರಂತರ ಪರಿಶ್ರಮದೊಂದಿಗೆ ಸಾಧಕರಾಗುವ ಮೂಲಕ ಶಾಲೆಗೆ ಕೀರ್ತಿ ತರಬೇಕೆಂದು ಸಲಹೆ ನೀಡಿದರು.

ಈ ವೇಳೆ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಕ್ಷೇತ್ರಶಿಕ್ಷಣಾಧಿಕಾರಿ ಧನಂಜಯ್, ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ನಿವೃತ್ತ ಪ್ರಾಧ್ಯಾಪಕ ಟಿ.ಎಂ.ಪ್ರಕಾಶ್, ಗೌರವ ಅಧ್ಯಕ್ಷ ಸೂರಜ್ ರಾಜಣ್ಣ, ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ದೇವರಹಳ್ಳಿ ರಾಜಣ್ಣ, ಅಧ್ಯಕ್ಷ ಸುಮನ್ ರಾಜಣ್ಣ, ಕಾರ್ಯದರ್ಶಿ ಕೆ.ಜೆ.ಸುಶ್ಮಿತಾ, ಟ್ರಸ್ಟಿ ಅಣ್ಣೂರು ಮಂಜು, ಮುಖ್ಯ ಶಿಕ್ಷಕಿ ಡಿ.ಎಂ.ನಂದಿನಿ ಹಲವರು ಇದ್ದರು. ಪೌರಾಣಿಕ ನಾಟಕಗಳು ಜೀವನದ ಪ್ರತಿಬಿಂಬ: ಆರ್ ಟಿಒ ಮಲ್ಲಿಕಾರ್ಜುನ್

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪೌರಾಣಿಕ ನಾಟಕಗಳು ಜೀವನದ ಪ್ರತಿಬಿಂಬವಾಗಿವೆ. ಜನರು ನಾಟಕದಲ್ಲಿ ಬರುವ ಉತ್ತಮ ಪಾತ್ರಧಾರಿಗಳ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಆರ್.ಟಿ.ಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದರು.

ತಾಲೂಕಿನ ಹೆಮ್ಮನಹಳ್ಳಿ ಶ್ರೀ ರಾಮಾಂಜನೇಯ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಏರ್ಪಡಿಸಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನದ ವೇದಿಕೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಸಮಾಜದಲ್ಲಿ ಹೆಚ್ಚಾಗುತ್ತಿರುವ ಆಧುನಿಕತೆಯಲ್ಲಿ ನಾಡಿನ ವೈಭವ ಮತ್ತು ಇತಿಹಾಸವನ್ನು ತಿಳಿಸುವಂತಹ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಕಣ್ಮರೆಯಾಗುತ್ತಿದೆ. ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ನೋಡಲು ಆಗಮಿಸಿರುವ ಜನಸಾಗರ ಕಂಡು ನಿಜಕ್ಕೂ ಸಂತಸ ತಂದಿದೆ ಎಂದರು.

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಹಾಗೂ ದೃಶ್ಯಮಾಧ್ಯಮಗಳ ಹಾವಳಿಯಿಂದಾಗಿ ಜಾನಪದ ಕಲೆಗಳು ದಿನದಿಂದ ದಿನಕ್ಕೆ ತೆರೆಮರೆಗೆ ಸರಿಯುತ್ತಿವೆ. ಪೌರಾಣಿಕ ಹಾಗೂ ಜಾನಪದದ ಕಣಜಗಳಾಗಿರುವ ಗ್ರಾಮೀಣ ಪ್ರದೇಶಗಳಲ್ಲಿನ ಕಲಾವಿದರನ್ನು ಗುರುತಿಸುವ ಕೆಲಸವನ್ನು ಮಾಡಬೇಕಿದೆ ಎಂದರು.

ಈ ವೇಳೆ ಕಾಂಗ್ರೆಸ್ ಮುಖಂಡ ಕೆ.ಬಿ.ರವಿಕುಮಾರ್, ಹಿರಿಯ ಮುಖಂಡರಾದ ಗಂಗೇಗೌಡ, ಪರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್, ಗ್ರಾಪಂ ಸದಸ್ಯರಾದ ಜಗದೀಶ್, ಪುಷ್ಪ ತಮಣ್ಣ, ಮುಖಂಡ ಎಚ್.ಜಿ ರವಿ, ತಮ್ಮಣ್ಣ, ಶಿಕ್ಷಕ ಕಟ್ಟೆ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.