ಸೇವಾ ಭಾರತಿ ಶಿಕ್ಷಣ ಸಂಸ್ಥೆ ವಿರುದ್ಧ ಪೋಷಕರ ಆಕ್ರೋಶ

| Published : Jul 18 2025, 12:45 AM IST

ಸಾರಾಂಶ

ಶಾರದ ಆಕಾಡೆಮಿ ವತಿಯಿಂದಲೇ ಪಾಠ ಮಾಡಿಸಬೇಕು ಎಂದು ಒತ್ತಾಯಿಸಿ ವಿಜ್ಞಾನ ವಿದ್ಯಾರ್ಥಿಗಳು, ಪೋಷಕರು ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಮತ್ತೊಂದು ಕಡೆ ಕಾಮರ್ಸ್ ವಿದ್ಯಾರ್ಥಿಗಳು ಜೈಶ್ರೀರಾಮ್, ಜೈ ಸೇವಾ ಭಾರತಿ ಘೋಷಣೆ ಕೂಗಿ ಪ್ರತಿಭಟನೆಗಿಳಿದ ಘಟನೆ ನಗರದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಶಾರದ ಆಕಾಡೆಮಿ ವತಿಯಿಂದಲೇ ಪಾಠ ಮಾಡಿಸಬೇಕು ಎಂದು ಒತ್ತಾಯಿಸಿ ವಿಜ್ಞಾನ ವಿದ್ಯಾರ್ಥಿಗಳು, ಪೋಷಕರು ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಮತ್ತೊಂದು ಕಡೆ ಕಾಮರ್ಸ್ ವಿದ್ಯಾರ್ಥಿಗಳು ಜೈಶ್ರೀರಾಮ್, ಜೈ ಸೇವಾ ಭಾರತಿ ಘೋಷಣೆ ಕೂಗಿ ಪ್ರತಿಭಟನೆಗಿಳಿದ ಘಟನೆ ನಗರದಲ್ಲಿ ನಡೆಯಿತು.ನಗರದ ಶಂಕರಪುರ ಬಡಾವಣೆಯಲ್ಲಿರುವ ಸೇವಾ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿ ಆಡಳಿತ ಮಂಡಳಿ, ಪೋಷಕರು ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ಶಾಲೆ ಕೊಠಡಿಯಿಂದ ಹೊರಬಂದ ವಿಜ್ಞಾನ ವಿದ್ಯಾರ್ಥಿಗಳು ಬೇಕು ಬೇಕು ಶಾರದ ಅಕಾಡೆಮಿ ಬೇಕು ಎಂದು ಘೋಷಣೆ ಕೂಗುತ್ತಿದ್ದಂತೆ ಮತ್ತೊಂದು ಶಾಲಾ ಕೊಠಡಿಯಿಂದ ಕಾಮರ್ಸ್‌ ವಿದ್ಯಾರ್ಥಿಗಳು ಹೊರಬಂದು ಜೈ ಶ್ರೀರಾಮ್, ಜೈ ಸೇವಾ ಭಾರತಿ ಘೋಷಣೆ ಕೂಗಿ ಪ್ರತಿಭಟನೆಗಿಳಿದರು.

ಎರಡು ಗುಂಪುಗಳ ನಡುವೆ ಸಂಘರ್ಷ ಶುರುವಾಗುವ ಮಟ್ಟಕ್ಕೆ ಹೋಗುತ್ತಿದ್ದನ್ನು ಅರಿತ ಉಪನ್ಯಾಸಕರು ಕಾಮರ್ಸ್ ವಿದ್ಯಾರ್ಥಿಗಳನ್ನು ವಾಪಸ್‌ ಕೊಠಡಿಗೆ ಕಳುಹಿಸಿದರು.ತರಾಟೆಗೆ ತೆಗೆದುಕೊಂಡ ಪೋಷಕರು:

ಮಕ್ಕಳಲ್ಲಿ ದ್ವೇಷದ ಭಾವನೆ ಬಿತ್ತುತ್ತಿದ್ದೀರಾ. ನಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗುತ್ತಿದೆ ಎಂದು ನ್ಯಾಯ ಕೇಳಲು ಬಂದರೆ ಮಕ್ಕಳನ್ನು ಹಿಂದೂ ಹೆಸರಿನಲ್ಲಿ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ನೀವು ಶಾಲೆಯಲ್ಲಿ ಮಕ್ಕಳಿಗೆ ಕಲಿಸಿರುವ ಸಂಸ್ಕಾರ, ಸಂಸ್ಕೃತಿ ಇದೇನಾ?. ವಿದ್ಯಾರ್ಥಿಗಳನ್ನು ಬಿಟ್ಟು ರೌಡಿಸಂ ಮಾಡಿಸುತ್ತಿದ್ದಾರೆ ಎಂದು ಆಡಳಿತ ಮಂಡಳಿ ಸದಸ್ಯ ಬಾಲಸುಬ್ರಹ್ಮಣ್ಯ ಸೇರಿ ಇತರರನ್ನು ಪೋಷಕರಾದ ನಾಗೇಶ್, ಮಾದೇಶ್, ಗೋಪಿ, ಮಹೇಶ್, ಮಹದೇವಸ್ವಾಮಿ ತರಾಟೆಗೆ ತೆಗೆದುಕೊಂಡರು.ಶಾರದ ಅಕಾಡೆಮಿ ನೋಡಿ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಿಗುತ್ತದೆ ಎಂದು ಕಾಲೇಜಿಗೆ ಸೇರಿಸಿದ್ದೇವೆ. ಆಗಾಗಿ ಶಾರದ ಅಕಾಡೆಮಿ ವತಿಯಿಂದ ಪಾಠ ಮಾಡಿಸಬೇಕು. ನಿಮ್ಮ ಅವರ ಒಳ ಜಗಳದಲ್ಲಿ ನಮ್ಮ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ಶಾರದ ಆಕಾಡೆಮಿ ವತಿಯಿಂದ ಪಾಠ ಮಾಡದಿದ್ದರೆ ನಮ್ಮ ಮಕ್ಕಳ ವರ್ಗಾವಣೆ ಪತ್ರ, ಕಟ್ಟಿರುವ ಶುಲ್ಕವನ್ನು ವಾಪಸ್ ನೀಡಬೇಕು ಎಂದು ಪೋಷಕರು ಒತ್ತಾಯಿಸಿದರು.ಮಕ್ಕಳಿಗಾಗಿರುವ ಅನ್ಯಾಯವನ್ನು ಕೇಳಲು ಬಂದರೆ ಬೇರೆ ಕೋರ್ಸ್ ವಿದ್ಯಾರ್ಥಿಗಳನ್ನು ಬಿಟ್ಟು ಗಲಾಟೆ ಮಾಡಿಸುತ್ತಿದ್ದಾರೆ ಇದೇನಾ ನೀವು ಕಲಿಸಿರುವ ಶಿಕ್ಷಣ, ಶಾಲೆಗೆ ಓದಲು ಬರಲು ಮಕ್ಕಳಿಂದ ಜೈ ಶ್ರೀರಾಮ್ ಘೋಷಣೆ ಕೂಗಿಸುವುದು ಎಷ್ಟು ಸರಿ ನಾವೇನು ಹಿಂದುಗಳಲ್ಲವಾ ಎಂದು ಪ್ರಶ್ನಿಸಿದರು.ಶಾರದ ಅಕಾಡೆಮಿ ಸತೀಶ್ ಮಾತನಾಡಿ, ನಮ್ಮ ಸಂಸ್ಥೆಯು ಸೇವಾ ಭಾರತಿ ಶಿಕ್ಷಣ ಸಂಸ್ಥೆಯೊಂದಿಗೆ ಹೊಂದಾಣಿಕೆಯಾಗಿದ್ದು ನೀಟ್, ಜೆಇಇ ತರಬೇತಿ ನೀಡಲಾಗುತ್ತಿದೆ. ಅಗ್ರಿಮೆಂಟ್ ಪ್ರಕಾರ ಸೇವಾ ಭಾರತಿ ಶಿಕ್ಷಣ ಸಂಸ್ಥೆ ನಡೆದುಕೊಂಡಿಲ್ಲ, 3 ತಿಂಗಳಾದರೂ ವೇತನ ನೀಡದೆ ನನಗೆ ಅನ್ಯಾಯ ಮಾಡಿದೆ. ಆಗ್ರಿಮೆಂಟ್ ಪ್ರಕಾರ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.