ಶಾಲೆಯ ಅವ್ಯವಸ್ಥೆ ಖಂಡಿಸಿ ಪಾಲಕರಿಂದ ಪ್ರತಿಭಟನೆ

| Published : Feb 06 2025, 12:15 AM IST

ಸಾರಾಂಶ

ಶಾಲೆಯ ಮುಂಭಾಗದಲ್ಲಿ ಮೇಲ್ಛಾವಣಿ ಇಲ್ಲದ ಕಾರಣ ಮಕ್ಕಳು ಬಿಸಿಲಲ್ಲಿ ಕುಳಿತು ಊಟ ಮಾಡುತ್ತಿದ್ದಾರೆ. ಶೌಚಾಲಯ, ಸುರಕ್ಷತೆ,ಸ್ವಚ್ಛತೆ ಇಲ್ಲವಾಗಿದೆ

ನರಗುಂದ: ಕುಡಿಯುವ ನೀರಿಲ್ಲದೇ ಪಟ್ಟಣದ ನಂ.4 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸ್ಥಗಿತಗೊಂಡ ಹಿನ್ನೆಲೆ ಪಾಲಕರು ಪ್ರತಿಭಟನೆ ನಡೆಸಿದ್ದರಿಂದ ಸಂಜೆ 4 ಗಂಟೆಗೆ ಶಿಕ್ಷಕರು ಅಡುಗೆ ಮಾಡಿ ಮಕ್ಕಳಿಗೆ ಊಟ ಬಡಿಸಿ ಮನೆಗೆ ಕಳುಹಿಸಿದ ಘಟನೆ ನಡೆದಿದೆ.

ಈ ವೇಳೆ ಬಸವರಾಜ ಹುಲಕುಂದ ಮಾತನಾಡಿ, ಬಿಸಿಯೂಟ ಸಿಗುತ್ತದೆ ಎಂದು ಪಾಲಕರು ಮಕ್ಕಳಿಗೆ ಶಾಲೆಗೆ ಕಳುಹಿಸಿ ಕೂಲಿ ಕೆಲಸಕ್ಕೆ ಹೋಗಿದ್ದಾರೆ. ವಿದ್ಯಾರ್ಥಿಗಳಿಗೆ ಮನೆಯಲ್ಲೂ ಊಟ ಇಲ್ಲ, ಶಾಲೆಯಲ್ಲಿಯೂ ಮಕ್ಕಳಿಗೆ ಬಿಸಿಯೂಟ ನೀಡದೇ ಶಿಕ್ಷಕರು ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ಅಕ್ಷರ ದಾಸೋಹ ಅಧಿಕಾರಿ ಎಂ.ಎಸ್.ಅಸುಂಡಿ ನೀರು ತಂದು ಅಡುಗೆ ಮಾಡಲು ಹೇಳಿದ್ದಾರೆ. ನಂತರ ಸಂಜೆ 4ಕ್ಕೆ ಮಕ್ಕಳಿಗೆ ಊಟ ಬಡಿಸಿ ಮನೆಗೆ ಕಳುಹಿಸಿದ್ದಾರೆ. ಈ ಕುರಿತು ಶಿಕ್ಷಕರ ಜತೆಗೆ ಚರ್ಚಿಸಿದಾಗ 52 ವರ್ಷಗಳಿಂದ ಈ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗೊತ್ತಾಗಿದೆ. ಮಲಪ್ರಭಾ ಜಲಾಶಯದಿಂದ 24.7 ನೀರು ಸರಬರಾಜು ಆಗುತ್ತಿದೆ. ಆದರೆ ಈ ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಹಳೆ ಬೋರವೆಲ್‌ನ ಸವಳು ನೀರು ಸರಬರಾಜು ಆಗುತ್ತಿದೆ. ಇದರಿಂದ ಮಕ್ಕಳು ನೆಗಡಿ, ಜ್ವರ, ಕೆಮ್ಮು ಇತರೇ ಸಮಸ್ಯೆ ಎದುರಿಸುವಂತಾಗಿದೆ ಎಂದು ಆರೋಪಿಸಿದರು.

ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಗುಡದರಿ ಮಾತನಾಡಿ, 24/7 ನಿತ್ಯ ಶಾಲೆಗೆ ಕುಡಿಯುವ ನೀರು ಬರುವಂತೆ ಪೈಪ್‌ಲೈನ್‌ ಹಾಕಿಕೊಡಲಾಗುವುದು, ಶುದ್ಧ ಕುಡಿವ ನೀರಿನ ಘಟಕ ಹಾಕಿಸಲು ಜಿಲ್ಲಾಧಿಕಾರಿ, ಶಾಸಕ, ತಹಸೀಲ್ದಾರ ಅವರಿಗೆ ಶಾಲೆಯಿಂದ ಮನವಿ ನೀಡಿದ್ದು, ಡಿಸಿ ಅವರಿಂದ ಆದೇಶ ಬಂದ ನಂತರ ಕ್ರೀಯಾ ಯೋಜನೆ ಹಾಕಿಕೊಂಡು ಕೆಲಸ ಪ್ರಾರಂಭಿಸಲಾಗುವುದು ಎಂದರು.

ಶಾಲೆಯ ಮುಂಭಾಗದಲ್ಲಿ ಮೇಲ್ಛಾವಣಿ ಇಲ್ಲದ ಕಾರಣ ಮಕ್ಕಳು ಬಿಸಿಲಲ್ಲಿ ಕುಳಿತು ಊಟ ಮಾಡುತ್ತಿದ್ದಾರೆ. ಶೌಚಾಲಯ, ಸುರಕ್ಷತೆ,ಸ್ವಚ್ಛತೆ ಇಲ್ಲವಾಗಿದೆ. ಶಾಲೆಯ ಸಮಸ್ಯೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯ ಇಬ್ರಾಹಿಂ ಸವಟಿಗಿ ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಪೋಷಕರಾದ ಬಸವರಾಜ ಹುಲಕುಂದ, ನೇತಾಜಿ ನರಗುಂದ, ಮಕ್ತುಮ ದಂಡಿನ, ಸಚಿನ ಚಲವಾದಿ, ಸಯ್ಯದ ಖಲೀಪ, ಮುತ್ತು ಗಾಯಕವಾಡ, ಶಿವಾಜಿ ಪವಾರ ಸೇರಿದಂತೆ ಇತರರು ಇದ್ದರು.