ವಿದ್ಯಾರ್ಥಿಗಳ ಪರೀಕ್ಷಾ ಯಶಸ್ಸಿನಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದು. ಪರೀಕ್ಷಾ ಪೂರ್ವ ತಯಾರಿಯು ಕೇವಲ ವಿದ್ಯಾರ್ಥಿಗಳ ಹೊಣೆಗಾರಿಕೆಯಾಗದೆ ಪೋಷಕರ ಜವಾಬ್ದಾರಿಯೂ ಹೌದು ಎಂದು ತರಬೇತುದಾರ ನೋಣಯ್ಯ ರೆಂಜಾಳ ಹೇಳಿದರು.

ಕಾರ್ಕಳ: ವಿದ್ಯಾರ್ಥಿಗಳ ಪರೀಕ್ಷಾ ಯಶಸ್ಸಿನಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದು. ಪರೀಕ್ಷಾ ಪೂರ್ವ ತಯಾರಿಯು ಕೇವಲ ವಿದ್ಯಾರ್ಥಿಗಳ ಹೊಣೆಗಾರಿಕೆಯಾಗದೆ ಪೋಷಕರ ಜವಾಬ್ದಾರಿಯೂ ಹೌದು ಎಂದು ತರಬೇತುದಾರ ನೋಣಯ್ಯ ರೆಂಜಾಳ ಹೇಳಿದರು.

ಜಿಲ್ಲಾ ಮಲೆಕುಡಿಯ ಸಂಘ ಉಡುಪಿ ಹಾಗೂ ಮಲೆಕುಡಿಯ ಜಿಲ್ಲಾ ಶೈಕ್ಷಣಿಕ ಸಮಿತಿ ಆಶ್ರಯದಲ್ಲಿ ಮಾಳ–ಪೇರಡ್ಕ ಸಮುದಾಯ ಭವನದಲ್ಲಿ ಫೆ. 1ರಂದು ಉಡುಪಿ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಪ್ರೌಢ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಓದು, ಪರೀಕ್ಷಾ ತಯಾರಿ ಹಾಗೂ ಪೋಷಕರು ವಹಿಸಬೇಕಾದ ಜವಾಬ್ದಾರಿಗಳು ಎಂಬ ವಿಷಯ ಕುರಿತಾಗಿ ವಿಶೇಷ ತರಬೇತಿ ಕಾರ್‍ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭ ವಿವಿಧ ಉಪಯುಕ್ತ ಮಾಹಿತಿಗಳನ್ನು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ನೀಡಿದರು.

ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಅವರು, “ಶಿಕ್ಷಣವು ಹೃದಯದಿಂದ ಮೂಡಿ ಹೃದಯವಂತಿಕೆಯಿಂದ ಕೂಡಿರಬೇಕು” ಎಂಬ ಅರಿಸ್ಟಾಟಲ್‌ನ ಮಾರ್ಮಿಕ ನುಡಿಯನ್ನು ಉದ್ಧರಿಸಿ ಮಾತನಾಡಿದರು. ಪ್ರಧಾನ ಅತಿಥಿಯಾಗಿ ಉಪಸ್ಥಿತರಿದ್ದ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ ಅವರು, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಂಘವು ನಿರಂತರವಾಗಿ ಸಹಕಾರ ನೀಡುತ್ತಾ ಬರುತ್ತಿದೆ ಎಂದರು.ವೇದಿಕೆಯಲ್ಲಿ ಪುಷ್ಪ ರೆಂಜಾಳ ಉಪಸ್ಥಿತರಿದ್ದರು. ಕಾರ್‍ಯಕ್ರಮದಲ್ಲಿ ಹಲವಾರು ಪೋಷಕರೊಂದಿಗೆ 78 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬೆಂಗಳೂರಿನ ಉದ್ಯಮಿ ಶ್ರೀ ವಿಕಾಸ್ ಭಟ್ ಅವರ ನೆರವಿನಿಂದ, ಶ್ರೀ ಸತ್ಯಸಾಯಿ ಭಕ್ತ ಮಂಡಳಿ ಬೆಂಗಳೂರು ಹಾಗೂ ಶ್ರೀ ಯಾದಳಂ ಗಂಗಾಧರ ಶೆಟ್ಟಿ ಅವರ ಸಹಕಾರದೊಂದಿಗೆ 12 ವಿದ್ಯಾರ್ಥಿಗಳಿಗೆ ತಿಂಗಳಿಗೆ ಒಟ್ಟು 42,000 ರು. ಮಾಸಿಕ ವಿದ್ಯಾರ್ಥಿವೇತನ ನೀಡಲಾಗುತ್ತಿದ್ದು, ಇದೇ ಸಮಾರಂಭದಲ್ಲಿ 10 ವಿದ್ಯಾರ್ಥಿಗಳಿಗೆ ಹಾಗೂ ಇತರ ವಿದ್ಯಾರ್ಥಿಗಳಿಗೆ ಉಡುಪುಗಳನ್ನು ವಿತರಿಸಲಾಯಿತು.

ಕಾರ್‍ಯಕ್ರಮದ ರುವಾರಿಯಾದ ನವೀನ್ ಕುಮಾರ್ ತೆಳ್ಳಾರ್ ಗಣ್ಯರನ್ನು ಸ್ವಾಗತಿಸಿದರು. ಪುಷ್ಪ ಕಾರ್‍ಯಕ್ರಮ ನಿರೂಪಿಸಿದರು. ಸುಪ್ರೀತ, ಪೂಜಾ, ಚಂಪ ಪ್ರಾರ್ಥನೆ ಸಲ್ಲಿಸಿದರು. ಶಿಕ್ಷಕಿ ಸುಜಾತ ವಂದಿಸಿದರು.