ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಶಾಲೆಗಳಿಗೆ ಮಕ್ಕಳನ್ನು ಕೇವಲ ಅಂಕಗಳಿಕೆಗಾಗಿ ಮಾತ್ರ ಸೇರಿಸುವ ಪೋಷಕರ ಮನಸ್ಥಿತಿ ಬದಲಾಗಬೇಕು. ಪೋಷಕರು ಓದುವುದರ ಜೊತೆಗೆ ಕ್ರೀಡೆಗೂ ಕೂಡ ಸಮಯ ಕೊಡಬೇಕು ಎಂದು ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಸಲಹೆ ನೀಡಿದರು.ನಗರದ ವಿಜಯನಗರ ಬಡಾವಣೆಯಲ್ಲಿರುವ ಟೈಮ್ಸ್ ಅಂತಾರಾಷ್ಟ್ರೀಯ ಶಾಲೆ ಆವರಣದಲ್ಲಿ ಶನಿವಾರ ನಡೆದ ಟೈಮ್ಸ್ ಕ್ರೀಡಾ ಅಕಾಡೆಮಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಶಾಲೆಗೆ ಮಕ್ಕಳನ್ನು ಸೇರಿಸುವ ವೇಳೆ ಕೇವಲ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಮಾತ್ರ ಪರಿಶೀಲನೆ ಮಾಡುತ್ತಾರೆ. ನಮ್ಮ ಮಕ್ಕಳನ್ನು ಹೇಗಾದರೂ ಮಾಡಿ ಶೇ.100ರಷ್ಟು ಅಂಕಗಳಿಸುವಂತೆ ಮಾಡಿ ಎಂದಷ್ಟೇ ಹೇಳುತ್ತಾರೆ. ಶಿಕ್ಷಣಕ್ಕೆ ಮಾತ್ರ ಒತ್ತು ನೀಡುತ್ತಾರೆ, ತಮ್ಮ ಮಕ್ಕಳು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದು ಪತ್ರಿಕೆಗಳಲ್ಲಿ ಮಕ್ಕಳ ಭಾವಚಿತ್ರ ಬಂದರೆ ಅಷ್ಟೇ ಸಾಧನೆ ಎಂದುಕೊಳ್ಳುತ್ತಾರೆ. ಒಳ್ಳೆಯ ಅಂಕಗಳಿಕೆ ಮಾಡಿದರೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದು ಭಾವಿಸುತ್ತಾರೆ, ಈ ಕಲ್ಪನೆಯಿಂದ ಪೋಷಕರು ಹೊರಬರಬೇಕಾಗಿದೆ ಎಂದರು.ಮಕ್ಕಳನ್ನು ಶಿಕ್ಷಣದ ಜೊತೆ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವಂತೆ ಪೋಷಕರು ಪ್ರೋತ್ಸಾಹಿಸಬೇಕು. ಚಿಕ್ಕ ವಯಸ್ಸಿನಲಿಯೇ ಮಕ್ಕಳು ಸೋಲು, ಗೆಲುವುಗಳನ್ನು ಕ್ರೀಡೆಯಲ್ಲಿ ಕಾಣಬೇಕು, ಆಗ ಮಾತ್ರ ಜೀವನದಲ್ಲಿ ಮುಂದೆ ಬರುವ ಸವಾಲುಗಳನ್ನು ಎದುರಿಸಲು ಸಾಧ್ಯ. ಶಿಕ್ಷಣ, ಮೊಬೈಲ್, ಟಿ.ವಿ. ಇಷ್ಟಕ್ಕೆ ಮಾತ್ರ ಸೀಮಿತರಾಗುವ ಮೂಲಕ ಮಕ್ಕಳು ಚಿಕ್ಕ ಚಿಕ್ಕ ಘಟನೆಗಳನ್ನು ಎದುರಿಸಲಾಗದಂತಹ ಪರಿಸ್ಥಿತಿಗೆ ಬಂದಿದ್ದಾರೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಬೌದ್ಧಿಕವಾಗಿ ಹಾಗೂ ಮಾನಸಿಕವಾಗಿ ಗಟ್ಟಿಯಾಗಿ ಬೆಳೆಯಲು ಸಹಕಾರಿಯಾಗಲಿದೆ. ಶಾಲಾ ಹಂತದಲ್ಲಿ ಮಕ್ಕಳನ್ನು ಕ್ರೀಡಾ ಚಟುವಟಿಕೆಗಳಿಗೆ ಭಾಗವಹಿಸುವಂತೆ ಮನೆಗಳಲ್ಲಿ ಹಾಗೂ ಶಾಲೆಗಳಲ್ಲಿ ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಟೈಮ್ಸ್ ಶಾಲೆ ಶಾಲಾ ಮಕ್ಕಳಿಗೆ ಅನುಕೂಲವಾಗುವ ಸಲುವಾಗಿ ದುಬಾರಿ ವೆಚ್ಚದಲ್ಲಿ ನೂತನ ಅಕಾಡೆಮಿಯನ್ನು ಸ್ಥಾಪನೆ ಮಾಡುವ ಮೂಲಕ ನುರಿತ ತರಬೇತುದಾರರಿಂದ ಮಕ್ಕಳಿಗೆ ತರಬೇತಿ ನೀಡಿ ಮಕ್ಕಳನ್ನು ಜಿಲ್ಲಾ ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಕ್ರೀಡಾಪಟುಗಳನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ತಮ್ಮ ಉದ್ದೇಶವನ್ನು ತಿಳಿಸಿದರು.
ಫುಟ್ಬಾಲ್ ತರಬೇತುದಾರ ಕೃಷ್ಣ ಅವರು ಮಾತನಾಡಿ, ಕ್ರೀಡೆ ಬೆಳೆಸಬೇಕು ಎನ್ನುವುದು ಕೆಲವರಲ್ಲಿ ಮಾತ್ರ ಇರುತ್ತದೆ. ಮನೆಯಲ್ಲಿ ಅಮ್ಮ ಮೊದಲ ಗುರು. ಯಾವುದಾದರೂ ಒಂದು ಕ್ರೀಡೆಯಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಿ. ಕ್ರೀಡೆಯಲ್ಲಿ ಇರುವ ಸುಖ ಯಾವುದರಲ್ಲೂ ಸಿಗುವುದಿಲ್ಲ. ಇದರಲ್ಲಿ ಮಕ್ಕಳನ್ನು ಅನುಭವಿಸಲು ಬಿಡಿ. ಮನೆಯಲ್ಲಿ ಗಂಡಾಗಲಿ, ಹೆಣ್ಣಾಗಲಿ ಕ್ರೀಡಾಪಟು ಆಗಿರಲಿ ಎಂದರು.ಕ್ರಿಕೆಟ್ ತರಬೇತುದಾರ ಎಚ್.ಆರ್. ನರಸಿಂಹ, ಒಂದು ದೊಡ್ಡ ಸಮೂಹ ಸಂಸ್ಥೆ ಕಟ್ಟಬೇಕಾದರೇ ಶ್ರಮವಿದೆ. ದಿನದ ಎಲ್ಲಾ ಸಮಯ ಓದುವುದಿಲ್ಲ. ಉಳಿದ ಸಮಯದಲ್ಲಿ ಓದುವುದರ ಜೊತೆಗೆ ಕ್ರೀಡೆಗೂ ಅವಕಾಶ ಕೊಡಬೇಕು. ಕ್ರೀಡೆಯಲ್ಲಿ ಆಡುವಾಗ ಓದುವುದನ್ನು ನೆನಪಿಸಿಕೊಳ್ಳಬೇಡಿ. ಅದೇ ರೀತಿ ಓದುವಾಗ ಕ್ರೀಡೆ ನೆನಪಿಸಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು, ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಶಿವರಾಮೇಗೌಡ, ಜಾಗದ ಮಾಲೀಕರಾದ ಹರೀಶ್, ವಿಶ್ವನಾಥ್, ಶಾಲೆಯ ಮುಖ್ಯ ಶಿಕ್ಷಕಿ ಬ್ಲೆಸ್ಸಿ ಶ್ಯಾಮ್, ಇತರರು ಉಪಸ್ಥಿತರಿದ್ದರು.