ಸಾರಾಂಶ
ಮಕ್ಕಳ ಚಟುವಟಿಕೆಗಳ ಮೇಲೆ ಪೋಷಕರು ಬಾಲ್ಯದಿಂದಲೇ ಜಾಗೃತಿ ವಹಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ ಪುಟ್ಟಸ್ವಾಮಿ ಹೇಳಿದರು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಮಕ್ಕಳ ಚಟುವಟಿಕೆಗಳ ಮೇಲೆ ಪೋಷಕರು ಬಾಲ್ಯದಿಂದಲೇ ಜಾಗೃತಿ ವಹಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ ಪುಟ್ಟಸ್ವಾಮಿ ಹೇಳಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಹಲೋ ಕಿಡ್ಸ್ ಮಾಂಡವ್ಯ ಶಾಲೆಯ 6ನೇ ವರ್ಷದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಸಾಮಾಜಿಕ ಜಾಲತಾಣಗಳ ಬಳಕೆ ಮಕ್ಕಳ ಬೆಳವಣಿಗೆ ಮೇಲೆ ಅನೇಕ ರೀತಿಯ ಪರಿಣಾಮಗಳನ್ನು ಬೀರುತ್ತಿವೆ. ಶಾಲಾ ಹಂತದಲ್ಲಿಯೇ ಮಕ್ಕಳ ಚಲನವಲನಗಳ ಮೇಲೆ ಪೋಷಕರು ಹೆಚ್ಚಿನ ನಿಗಾ ವಹಿಸಬೇಕು ಎಂದು ಕರೆ ನೀಡಿದರು.
ಹಲೋ ಕಿಡ್ಸ್ ಶಾಲೆಯು ನವೋದಯ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಮೂಲಕ ಉನ್ನತ ಮಟ್ಟಕ್ಕೆ ಬೆಳೆಸಲು ಶ್ರಮಿಸುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಪಡೆಯುವಂತಾಗಬೇಕು ಎಂದು ಹೇಳಿದರು.ಸಾವಯವ ಕೃಷಿಕರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ಮಾತನಾಡಿ, ಕೃತಕ ಆಹಾರಗಳಿಂದ ಮಕ್ಕಳನ್ನು ದೂರವಿರಿಸಿ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ರೂಪಿಸಿಕೊಳ್ಳುವ ಮೂಲಕ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಕಾಳಜಿ ವಹಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆ ಸಂಸ್ಥಾಪಕ ಆನಂದ್ ಮಾತನಾಡಿ, 18 ಮಕ್ಕಳಿಂದ ಚಿಕ್ಕದಾಗಿ ಆರಂಭವಾದ ಶಾಲೆ ಈಗ ನೂರರ ಗಡಿ ದಾಟಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಒಂದು ಹಾಗೂ ಎರಡನೇ ತರಗತಿಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.ಮುಖ್ಯ ಶಿಕ್ಷಕಿ ಆಶಾ ಆನಂದ್ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಲಾಗಿತ್ತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.