ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಹೊಸಹೊಳಲು ಜಿ.ಆರ್.ನರಸಿಂಹಮೂರ್ತಿ, ಬೆಂಗಳೂರಿನ ನಿವೃತ್ತ ಪ್ರೌಢಶಾಲಾ ಶಿಕ್ಷಕಿ ಕೆ.ಎಸ್. ಗಿರಿಜಾ ಹಾಗೂ ಆಧ್ಯಾತ್ಮಿಕ ಚಿಂತಕರಾದ ವಿದ್ವಾನ್ ಜಗದೀಶ್ ಶರ್ಮಾ ಸಂಪಾ ಅವರಿಗೆ ದೇವತುಷ್ಟ ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪೋಷಕರು ತಮ್ಮ ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಿಸಿ, ಮಾನವೀಯ ಮೌಲ್ಯಗಳನ್ನು ತುಂಬಿ ಭವಿಷ್ಯದ ನಾಗರಿಕರನ್ನಾಗಿ ಸಜ್ಜುಗೊಳಿಸಬೇಕು ಎಂದು ಲೇಖಕ, ವಿದ್ವಾನ್ ಜಗದೀಶ್ ಶರ್ಮ ಸಂಪಾ ಕರೆ ನೀಡಿದರು.ಪಟ್ಟಣದ ಜಯನಗರ ಬಡಾವಣೆಯ ಪ್ರಬುದ್ಧ ಪ್ರತಿಷ್ಠಾನದ ಫ್ರಸ್ಟ್ ಕ್ರೈ ಇಂಟೆಲಿಟಾಟ್ಸ್ ಫ್ರೀ ಸ್ಕೂಲ್ ನ 3ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣವು ಇಂದು ವ್ಯಾಪಾರೀಕರಣಗೊಂಡು ಮಾರಾಟದ ಸರಕಾಗಿ ಬದಲಾಗಿದೆ. ಋಷಿ ಮುನಿಗಳ ಕಾಲದಲ್ಲಿ ಇದ್ದ ಗುರುಕುಲ ಪದ್ಧತಿಯ ಶಿಕ್ಷಣ ಇಂದು ಮಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಣವಿದ್ದವರಿಗೆ ಮಣೆ, ಡೊನೇಷನ್ ನೀಡಿದ ಶ್ರೀಮಂತರ ಮಕ್ಕಳಿಗೆ ಮಾತ್ರ ಗುಣಮಟ್ಟದ ಶಿಕ್ಷಣ ಎಂಬ ಮಾತು ಜನಜನಿತವಾಗಿದೆ. ಈ ನಡುವೆ ಪ್ರತಿಷ್ಠಾನ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕಡಿಮೆ ಖರ್ಚಿನಲ್ಲಿ ನೀಡಲು ಮುಂದಾಗಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟರು.ಪ್ರಬುದ್ಧ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಅವಧಾನಿ ಮಾತನಾಡಿ, ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಕಲಿಸಿಕೊಡಲಾಗುತ್ತಿದೆ. ಮಕ್ಕಳು ಉತ್ಸಾಹದಿಂದ ಕಲಿಯುತ್ತಿದ್ದಾರೆ ಎಂದು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಹೊಸಹೊಳಲು ಜಿ.ಆರ್.ನರಸಿಂಹಮೂರ್ತಿ, ಬೆಂಗಳೂರಿನ ನಿವೃತ್ತ ಪ್ರೌಢಶಾಲಾ ಶಿಕ್ಷಕಿ ಕೆ.ಎಸ್. ಗಿರಿಜಾ ಹಾಗೂ ಆಧ್ಯಾತ್ಮಿಕ ಚಿಂತಕರಾದ ವಿದ್ವಾನ್ ಜಗದೀಶ್ ಶರ್ಮಾ ಸಂಪಾ ಅವರಿಗೆ ದೇವತುಷ್ಟ ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಪ್ರಬುದ್ಧ ಪ್ರತಿಷ್ಠಾನದ ಕಾರ್ಯದರ್ಶಿ ಶಮಂತ್, ಟ್ರಸ್ಟಿ ಗಳಾದ ಕೌಸ್ತುಭ ಭಾರತೀಪುರ, ಶ್ರೀನಿಧಿ, ಮುಖ್ಯ ಶಿಕ್ಷಕಿ ಪಲ್ಲವಿ, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಕಸಾಪ ತಾಲೂಕು ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಬಳ್ಳೇಕೆರೆ ಮಂಜುನಾಥ್, ಮುಖಂಡರಾದ ವಿ.ಡಿ.ಮೋಹನ್, ಬತ್ತದ ವೆಂಕಟರಾಮು, ಸುಶೀಲಮ್ಮ ರಾಮದಾಸ್ ಉಪಸ್ಥಿತರಿದ್ದರು.