ಸಾರಾಂಶ
ಹರಪನಹಳ್ಳಿ: ಇದನ್ನೇ ಓದಬೇಕು ಎಂದು ಒತ್ತಡ ಹೇರದೇ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.ಪ್ರತಿ ಮಕ್ಕಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅವರವರ ಪ್ರತಿಭೆ ತೋರಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಭಾಷಣ, ಕಲೆ, ಚಿತ್ರ ಕಲೆ, ಪೇಂಟಿಂಗ್, ರಸಪ್ರಶ್ನೆ ಹೀಗೆ ಯಾವುದರಲ್ಲಿ ತಮಗೆ ಆಸಕ್ತಿ ಇದೆಯೋ ಅದರಲ್ಲಿ ಮುಂದಿನ ದಿನಗಳಲ್ಲಿ ಮುಂದುವರಿಯಿರಿ ಎಂದು ಮಕ್ಕಳಿಗೆ ಸಲಹೆ ನೀಡಿದರು.
ಕೇವಲ ಪಠ್ಯಕ್ಕೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳ ಕಡೆ ಗಮನ ಹರಿಸಿ, ಮಕ್ಕಳ ಆಸಕ್ತಿಗೆ ಶಿಕ್ಷಕರು, ಪೋಷಕರು ಸಹಕಾರ ನೀಡಬೇಕು ಎಂದರು.ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಶಾಸಕರು ತಾಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ಶಿಕ್ಷಕರು ಸಹ ಮಕ್ಕಳನ್ನು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಲು ಪ್ರೋತ್ಸಾಹಿಸಬೇಕು ಎಂದರು.
ಬಿಇಒ ಎಚ್.ಲೇಪಾಕ್ಷಪ್ಪ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ಅಷ್ಟೇ ಸಾಲದು. ಪಠ್ಯೇತರ ಚಟುವಟಿಕೆಗಳು ಮುಖ್ಯ. ಶಿಕ್ಷಕರು ಹಾಡುಗಾರಿಕೆ, ನಾಟಕ, ಅಭಿನಯ ಮುಂತಾದ ವಿವಿಧ ಚಟುವಟಿಕೆಗಳ ಮೂಲಕ ಅವರ ಪ್ರತಿಭೆ ಹೊರತರಬೇಕಾಗಿದೆ ಎಂದರು.ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಶಿಕ್ಷಕರು ತಯಾರು ಮಾಡಬೇಕಿದೆ. ತೀರ್ಪು ಗಾರರು ಪಾರದರ್ಶಕ ತೀರ್ಪು ನೀಡಬೇಕು ಎಂದು ಹೇಳಿದರು.
ಪುರಸಭಾ ಅಧ್ಯಕ್ಷೆ ಫಾತಿಮಾಬಿ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಬೇರಪ್ಪ, ಕ್ಷೇತ್ರಸಮನ್ವಯಾಧಿಕಾರಿ ಹೊನ್ನತ್ತೆಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕ ಷಣ್ಮುಖಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಗರಾಜ, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಸಂಗಪ್ಪನವರ್, ಶಿಕ್ಷಕರ ಸಂಘದ ರಾಜ್ಯ ಉಪಾದ್ಯಕ್ಷೆ ಪದ್ಮಲತಾ, ಪುರಸಭಾ ಸದಸ್ಯರಾದ ಲಾಟಿ ದಾದಾಪೀರ, ಜಾಕೀರ ಹುಸೇನ್, ಮುಖಂಡ ಮೈದೂರು ರಾಮಣ್ಣ, ಶಿಕ್ಷಣ ಸಂಯೋಜಕರಾದ ಕಬೀರನಾಯ್ಕ, ಗಿರಜ್ಜಿ ಮಂಜುನಾಥ, ಲಕ್ಷ್ಮಿ ರಂಗಣ್ಣನವರ್, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ.ರಾಜಶೇಖರ, ಬಿಆರ್‌ಪಿ ನಾಗರಾಜ, ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಬಿ.ಚಂದ್ರಮೌಳಿ, ಮುಖ್ಯಶಿಕ್ಷಕ ಚೇತನಬಣಕಾರ, ಎಂ.ರಮೇಶ ಉಪಸ್ಥಿತರಿದ್ದರು.ಹರಪನಹಳ್ಳಿ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕಿ ಎಂ.ಪಿ.ಲತಾ ಉದ್ಘಾಟಿಸಿದರು.