ಕನ್ನಡಪ್ರಭ ವಾರ್ತೆ ಹಲಗೂರು

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ತೊರೆದು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಲು ಮುಂದಾಗಬೇಕು ಎಂದು ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ತಿಳಿಸಿದರು.

ಕಸಬಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ರೆ ಮತ್ತು ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸಿಎಸ್ಆರ್ ಅನುದಾನದ ಮೂಲಕ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿಯೂ ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಲು ಶ್ರಮಿಸಲಾಗುತ್ತಿದೆ ಎಂದರು.

ಅಂತರವಳ್ಳಿ ಸರ್ಕಾರಿ ಶಾಲೆ ಕೆಲ ಕೊಠಡಿಗಳ ದುರಸ್ತಿ ಕಾರ್ಯ ಮಾಡಿಸಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡರು. ಗ್ರಾಮದಿಂದ ಹೊಸಪುರ ಗ್ರಾಮಕ್ಕೆ ತೆರಳುವ ಕಚ್ಚಾ ರಸ್ತೆಯು ತೀರಾ ಹದಗೆಟ್ಟಿದೆ. ಮಳೆ ಬಿದ್ದಾಗ ಕೆಸರು ಗದ್ದೆಯಾಗಲಿದೆ. ರೈತರು ಜಮೀನುಗಳಿಗೆ ತೆರಳಲು ಬಹಳ ತ್ರಾಸ ಪಡುವಂತಾಗಿದೆ. ಉತ್ತಮ ರಸ್ತೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಶಾಸಕರು ಅನುದಾನ ಸಿದ್ದವಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು. ಯತ್ತಂಬಾಡಿ ಗ್ರಾಮದಲ್ಲಿ ಮಾರಮ್ಮ ದೇವಸ್ಥಾನ ಸುತ್ತಮುತ್ತಲಿನ ಭೂ ಒತ್ತುವರಿ ಮಾಡಿಕೊಂಡಿದ್ದು, ತೆರವು ಮಾಡಿಸಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.


ನಂತರ ಬಾಣಸಮುದ್ರ ಗ್ರಾಮಕ್ಕೆ ತೆರಳಿ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಗ್ರಾಮದ ಮುಖಂಡ ಶ್ರೀಧರ್ ಬೆಂಗಳೂರಯ್ಯ ದೊಡ್ಡ ಬಸವಣ್ಣ ದೇವಸ್ಥಾನದ ಅಭಿವೃದ್ಧಿಗೆ ಸಹಕಾರ ನೀಡಬೇಕು ಹಾಗೂ ನಮ್ಮ ಗ್ರಾಮದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದ ಮೇರೆಗೆ ಮುಂದೆ ನನ್ನ ಅನುದಾನದಲ್ಲಿ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಈ ವೇಳೆ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಕೆ.ಕೃಷ್ಣಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಾದೇಶ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಎಂ.ಶಿವಕುಮಾರ್, ಹಲಸಹಳ್ಳಿ ವಿವಿಧೋದ್ದೇಶ ಸಹಕಾರ ಬ್ಯಾಂಕಿನ ಅಧ್ಯಕ್ಷ ಶ್ರೀಧರ್, ಮುಖಂಡರಾದ ನಾಡಗೌಡರ ದೇವರಾಜು, ಮಲ್ಲೇಶ, ಬಸವರಾಜು, ವೆಂಕಟಪ್ಪ, ಕೆ.ಎಂ.ಮೋಹನ್ ಕುಮಾರ್, ನಾಗೇಂದ್ರ, ಗುತ್ತಿಗೆದಾರ ಜಕ್ಕನಹಳ್ಳಿ ಕೆ.ಇಂದ್ರ, ನಟರಾಜು, ಕುಮಾರ್, ಕಾರ್ಯನಿರ್ವಾಹಕ ಎಂಜಿಯರ್‌ ಅಪ್ಪಣ್ಣಬೋಯಿ ಸೇರಿದಂತೆ ಹಲವರು ಇದ್ದರು.