ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಪೋಷಕರ ಖಾಸಗಿ ಶಾಲೆಗಳು ಹಾಗೂ ಆಂಗ್ಲ ಭಾಷೆಯ ಮೇಲಿನ ಮೋಹದಿಂದಾಗಿ ಸರ್ಕಾರಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ, ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದು ವಿಷಾದನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಮಧು ಪಿ ಗೌಡ ತಿಳಿಸಿದರು.ತಾಲ್ಲೂಕಿನ ಭರತವಳ್ಳಿ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣ ನೀಡುತ್ತಿರುವುದ ಜೊತೆಗೆ ಸರ್ಕಾರದಿಂದ ಮಧ್ಯಾಹ್ನದ ಬಿಸಿ ಊಟ, ಉಚಿತ ಸಮವಸ್ತ್ರ, ಉಚಿತ ಪುಸ್ತಕ ಸೇರಿದಂತೆ ಹಲವಾರು ಸವಲತ್ತುಗಳನ್ನು ನೀಡುತ್ತಿದ್ದರು ಸಹ, ಪೋಷಕರು ತಮ್ಮ ಮಕ್ಕಳನ್ನು ಸಾವಿರಾರು ರುಪಾಯಿ ಡೊನೇಷನ್ ನೀಡಿ ಪಟ್ಟಣಗಳಲ್ಲಿರುವ ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವುದು ದುರದೃಷ್ಟಕರ. ಆದ್ದರಿಂದ ಸರ್ಕಾರದವರು ಖಾಸಗಿ ಶಾಲೆಗಳ ಹಾವಳಿಗೆ ಕಡಿವಾಣ ಹಾಕಬೇಕು. ಪೋಷಕರು ಸಹ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಮನಸ್ಸು ಮಾಡಬೇಕು. ಏಕೆಂದರೆ ಹಿಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಇಷ್ಟೊಂದು ಸೌಲಭ್ಯಗಳು ಇಲ್ಲದಿದ್ದರೂ ಸಹ ಇಂತಹ ಶಾಲೆಗಳಲ್ಲಿ ಓದಿದ ಹೆಚ್ಚಿನವರೇ ಉನ್ನತ ಸ್ಥಾನಗಳಿಗೆ ಏರಿದ್ದಾರೆ ಎಂದು ತಿಳಿಸಿದರು.
ತಾಲೂಕು ನೌಕರರ ಸಂಘದ ಅಧ್ಯಕ್ಷ ವರದರಾಜ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವಾರು ದಾನಿಗಳು, ಪೀಠೋಪಕರಣಗಳು ಸೇರಿದಂತೆ ಹಲವಾರು ವಸ್ತುಗಳನ್ನು ದಾನವಾಗಿ ನೀಡುತ್ತಿದ್ದಾರೆ. ಮಧು. ಪಿ.ಗೌಡ ಹಾಗೂ ಅವರ ಸ್ನೇಹಿತರಾದ ಅಜಯ್ ಅವರು ಶಾಲಾ ವಿದ್ಯಾರ್ಥಿಗಳು ಶುದ್ಧ ಕುಡಿಯುವ ನೀರನ್ನು ಬಳಸಲೆಂದು ವಾಟರ್ ಫಿಲ್ಟರ್ ನೀಡಿದ್ದು, ಅದಕ್ಕಾಗಿ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ತಾಲೂಕಿನಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರು ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗಿಂತ ಯಾವುದೇ ಕಾರಣಕ್ಕೂ ಕಡಿಮೆ ಇಲ್ಲ ಎಂಬಂತಾಗಬೇಕೆಂದು ಕೆಲ ಶಾಲೆಗಳಲ್ಲಿ ವಾಹನ, ಕಂಪ್ಯೂಟರ್, ಪೀಠೋಪಕರಣಗಳು, ಸಮವಸ್ತ್ರ, ಬ್ಯಾಗ್ ಹಾಗೂ ನೋಟ್ ಬುಕ್ ಗಳು ಸೇರಿದಂತೆ ವಿವಿಧ ರೀತಿಯಲ್ಲಿ ಸಹಕಾರ ನೀಡುತ್ತಿರುವುದು ಶ್ಲಾಘನೀಯ. ಎಲ್ಲಾ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು ಕೈಜೋಡಿಸಿದರೆ ಯಾವುದೇ ಸರ್ಕಾರಿ ಶಾಲೆಗಳು ಮುಚ್ಚುವ ಪ್ರಮೇಯವೇ ಬರುವುದಿಲ್ಲ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಜಯಣ್ಣ, ಎಸ್ ಡಿ ಎಂ ಸಿ ಅಧ್ಯಕ್ಷ ಷಣ್ಮುಖ, ಉಪಾಧ್ಯಕ್ಷ ಮಮತಾ, ದಾನಿಗಳಾದ ಅಜಯ್, ಮಧು ಮುಂತಾದವರು ಉಪಸ್ಥಿತರಿದ್ದರು.