ಮಕ್ಕಳ ಶಿಕ್ಷಣಕ್ಕೆ ಪೋಷಕರು ಆದ್ಯತೆ ನೀಡಲಿ

| Published : May 31 2025, 12:13 AM IST

ಸಾರಾಂಶ

೬ ರಿಂದ ೧೪ ವರ್ಷದೊಳಗಿನ ಎಲ್ಲ ಮಕ್ಕಳನ್ನು ನಮ್ಮ ಸರ್ಕಾರಿ ಶಾಲೆಗಳಿಗೆ ಸೇರಿಸಿ ಅವರ ಭವಿಷ್ಯತ್ತನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರ ಅಗತ್ಯ

ಕುಕನೂರು: ಪ್ರತಿಯೊಬ್ಬ ಮಗು ಶಿಕ್ಷಣದಿಂದ ವಂಚಿತಗೊಳ್ಳಬಾರದು, ಪೋಷಕರು ಮಕ್ಕಳ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಬೇಕು ಎಂದು ಬಿಇಒ ಸೋಮಶೇಖರಗೌಡ ಪಾಟೀಲ್ ಹೇಳಿದರು.

ತಾಲೂಕಿನ ಲಕಮಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಹಲವು ಸೌಲಭ್ಯಗಳನ್ನು ಮಕ್ಕಳಿಗೆ ನೀಡುತ್ತಿದೆ. ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳು ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆಯ ಹಿರಿಮೆ ಹೆಚ್ಚಿಸಿದ್ದಾರೆ. ೬ ರಿಂದ ೧೪ ವರ್ಷದೊಳಗಿನ ಎಲ್ಲ ಮಕ್ಕಳನ್ನು ನಮ್ಮ ಸರ್ಕಾರಿ ಶಾಲೆಗಳಿಗೆ ಸೇರಿಸಿ ಅವರ ಭವಿಷ್ಯತ್ತನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಇದರಿಂದ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗ್ರಾಮದ ಹಿರಿಯರ ಸಹಕಾರ ಮುಖ್ಯವಾಗಿದೆ ಎಂದರು.

ಇಲಾಖೆಯಿಂದ ಒದಗಿಸಲಾಗುವ ಎಲ್ಲ ಸೌಲಭ್ಯಗಳನ್ನು ಶಾಲೆಯ ಪ್ರತಿಯೊಂದು ಮಗುವಿಗೂ ತಲುಪಿಸುವಂತೆ ಮುಖ್ಯೋಪಾಧ್ಯಾಯರಿಗೆ ಸೂಚಿಸಿದರು.

ಶಾಲೆಗೆ ಭೂ ದಾನಿಗಳಾದ ಬಸವರಾಜ ಅಂಗಡಿ,ಕೊಟ್ರಗೌಡ ಹುಡೇಕಲ್,ಎಸ್ಡಿಎಂಸಿ ಅಧ್ಯಕ್ಷ ಶರಣಪ್ಪ ಅವಾರಿ, ಸಿಆರ್‌ಸಿ ಮಂಜುನಾಥ ಮಟ್ಟಿ, ಗ್ರಾಪಂ ಸದಸ್ಯ ಸಿದ್ದಲಿಂಗಪ್ಪ ಗುರಿಕಾರ, ಮುಖ್ಯೋಪಾಧ್ಯಾಯ ಅಶೋಕ ಮಾದಿನೂರ, ಶ್ರೀಕಾಂತ ಹೊಸಮನಿ, ಹನುಮಂತಪ್ಪ ಮಡಿವಾಳರ, ಶ್ರೀಧರ ಬಡಿಗೇರ, ಶಿಕ್ಷಕರಾದ ಶರಣಪ್ಪ ಮಾದಿನೂರು, ಎ.ವಿಜಯಕಮಾರ, ಶಾಂತಪ್ಪ ಪಟ್ಟಣಶೆಟ್ಟಿ, ಶಿವಪುತ್ರಪ್ಪ ಮುತ್ತಾಳ, ವಿಶಾಲಾಕ್ಷಿ ಮೇಟಿ, ಸವಿತಾ ವೀರನಗೌಡರ, ಪಿ.ಲತಾ, ಎಚ್.ಮಂಜುಳಾ ಇತರರಿದ್ದರು.

ಮೆರವಣಿಗೆಗೆ ಚಾಲನೆ:

ವಿಶೇಷವಾಗಿ ಶಾಲಾ ಪ್ರಾರಂಭೋತ್ಸವ ನಿಮಿತ್ತ ಎತ್ತಿನ ಚಕ್ಕಡಿಯಲ್ಲಿ ಸರಸ್ವತಿ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಅದ್ಧೂರಿ ಮೆರವಣಿಗೆ ನಡೆಸಿದರು. ಬಿಇಒ ಸೋಮಶೇಖರಗೌಡ ಪಾಟೀಲ್ ಎತ್ತಿನ ಚಕ್ಕಡಿಯನ್ನು ಚಲಾಯಿಸಿದರು.