ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪೋಷಕರು ಮಕ್ಕಳ ಶಿಕ್ಷಣದ ಜೊತೆಗೆ ಅವರಲ್ಲಿ ಅಡಗಿರುವ ಸಾಂಸ್ಕೃತಿಕ ಪ್ರತಿಭೆ ಅನಾವರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಕಾಳಿರಯ್ಯ ಹೇಳಿದರು.ಪಟ್ಟಣದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಕೇವಲ ನಾಲ್ಕು ಗೋಡೆಗಳ ಮಧ್ಯದ ಶಿಕ್ಷಣಕ್ಕೆ ಸೀಮಿತವಾಗದೆ ಈ ನಾಡಿನ ಸಂಸ್ಕೃತಿ ಮತ್ತು ಪರಂಪರೆಗಳ ಉಳಿವಿಗಾಗಿ ಕ್ರೀಡೆ, ಕಲೆ, ಸಾಹಿತ್ಯ, ಜಾನಪದ ನಾಟಕಗಳ ಪ್ರತಿಬಿಂಬಿಸುವ ಕಾರ್ಯದಲ್ಲಿ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.ಪ್ರತಿ ವಿದ್ಯಾರ್ಥಿಗಳಲ್ಲಿ ವಿಭಿನ್ನ ಸೃಜನಶೀಲತೆ ಕಲೆಗಳಿವೆ. ಅವುಗಳನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಅತ್ಯುತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಪುರಸಭಾಧ್ಯಕ್ಷ ಕೋಕಿಲ ಅರುಣ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸಾಧನೆಯೇ ಗುರಿ ಎಂದು ಭಾವಿಸಬೇಕು. ಶಿಕ್ಷಣದ ಪ್ರತಿ ಹಂತದಲ್ಲೂ ತಮ್ಮಲ್ಲಿರುವ ಪ್ರತಿಭೆ ಅನಾವರಣಕ್ಕೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜು, ಚುಂಚಶ್ರೀ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಡಾ. ಬಿ.ಕೃಷ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕಿ ರಾಜೇಶ್ವರಿ, ಪುರಸಭಾ ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಕಸ್ತೂರಿ, ಮುಖ್ಯ ಶಿಕ್ಷಕ ಅನಂತೇಗೌಡ, ಮೈಸೂರು ಡಯಟ್ ನ ಪ್ರಾಂಶುಪಾಲ ರಾಜೇಂದ್ರ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ನಾಗೇಶ, ಮುಖಂಡರಾದ ಕದಲೂರು ರವಿ, ಫಕ್ರುದ್ದೀನ್ ಸಾಬ್, ರವಿಚಂದ್ರ ಪಾಲ್ಗೊಂಡಿದ್ದರು.