ಪೋಷಕರು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ನೀಡಬೇಕು ಎಂದು ಅಮ್ಮ ಫೌಂಡೇಷನ್‌ನ ಶಿಕ್ಷಣ ವಿಭಾಗದ ಮುಖ್ಯಸ್ಥ ಮಾಕಾರು ಸತೀಶ್ ಸಲಹೆ ನೀಡಿದರು.

ನರಸಿಂಹರಾಜಪುರ: ಪೋಷಕರು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ನೀಡಬೇಕು ಎಂದು ಅಮ್ಮ ಫೌಂಡೇಷನ್‌ನ ಶಿಕ್ಷಣ ವಿಭಾಗದ ಮುಖ್ಯಸ್ಥ ಮಾಕಾರು ಸತೀಶ್ ಸಲಹೆ ನೀಡಿದರು.

ಮಂಗಳವಾರ ನಾಗರಮಕ್ಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮ್ಮ ಫೌಂಡೇಷನ್‌ನಿಂದ ಮಕ್ಕಳಿಗೆ ನೋಟ್‌ಬುಕ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಅಮ್ಮ ಫೌಂಡೇಷನ್ ಸಂಸ್ಥಾಪಕ ಸುಧಾಕರ ಶೆಟ್ಟರು ಕಳೆದ 15 ವರ್ಷದಿಂದಲೂ ಅಮ್ಮನ ನೆನಪಿಗಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಳೆದ 6 ವರ್ಷದಿಂದ ಅಮ್ಮ ಫೌಂಡೇಷನ್ ಸಂಸ್ಥಾಪಕ ಸುಧಾಕರ ಶೆಟ್ಟಿ ನೇತೃತ್ವದಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಅಮ್ಮ ಫೌಂಡೇಷನ್‌ನಿಂದ 30 ಆರೋಗ್ಯ ಶಿಬಿರ ನಡೆಸಲಾಗಿದೆ. ನೇತ್ರ ಶಿಬಿರಗಳನ್ನು ನಡೆಸಿ 230 ಜನರಿಗೆ ಶಸ್ತ್ರ ಚಿಕಿತ್ಸೆ ನೀಡಲಾಗಿದೆ. 5 ಸಾವಿರ ಜನರಿಗೆ ಕನ್ನಡಕ ವಿತರಿಸಲಾಗಿದೆ. 2 ರಿಂದ 3 ಬಾರಿ ಉದ್ಯೋಗ ಮೇಳ ನಡೆಸಲಾಗಿದೆ. ಕೊರೋನ ಸಂದರ್ಭದಲ್ಲಿ ಸುಧಾಕರ ಶೆಟ್ಟಿ ಅವರು 10 ರಿಂದ 12 ಸಾವಿರ ಜನರಿಗೆ ಹೆಲ್ತ್‌ಕಿಟ್ ನೀಡಿದ್ದಾರೆ. ಪ್ರತಿ ವರ್ಷ 50 ರಿಂದ 60 ಶಾಲೆಗಳಿಗೆ ನೋಟ್‌ಬುಕ್ ವಿತರಿಸಲಾಗುತ್ತಿದೆ. ಅಗತ್ಯವಿರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸುವ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ತಿಳಿಸಿದರು.

ಸ್ಥಳೀಯ ಮುಖಂಡ ಬೆಮ್ಮನೆ ಸುಬೋದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಮ್ಮ ಫೌಂಡೇಷನ್ ಮೂಲಕ ನಮಗೂ ಸಮಾಜ ಸೇವೆ ಮಾಡುವ ಭಾಗ್ಯ ದೊರಕಿದೆ. ಹಣ ಇದ್ದವರೆಲ್ಲಾ ದಾನ ಮಾಡುವುದಿಲ್ಲ. ಸುಧಾಕರ ಶೆಟ್ಟಿ ಅವರು ಜಾತಿ, ಧರ್ಮ ಭೇದವಿಲ್ಲದೆ ಸಮಾಜದ ಎಲ್ಲರಿಗೂ ದಾನ ಮಾಡುತ್ತಾರೆ. ಇಂತಹ ದಾನಿಗಳಿಗೆ ಜನರ ಪ್ರೋತ್ಸಾಹ ನೀಡಬೇಕು ಎಂದು ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಅಮ್ಮ ಫೌಂಡೇಷನ್ ನ ಶೃಂಗೇರಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ್ ಮಾತನಾಡಿ, ಅಮ್ಮ ಫೌಂಡೇಷನ್‌ನಿಂದ ಅಗತ್ಯವಿದ್ದ 65 ಜನರಿಗೆ ವ್ಹೀಲ್‌ಚೇರ್‌ ನೀಡಿದ್ದೇವೆ. ಅಮ್ಮ ಫೌಂಡೇಷನ್ ಸದಸ್ಯರ ಸಲಹೆ ಮೇರೆಗೆ ಆಯಾ ಭಾಗದಲ್ಲಿ ಅಗತ್ಯ ಇರುವ ಜನರಿಗೆ ಸಹಾಯ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸುಧಾಕರ್ ಶೆಟ್ಟಿ ಆಪ್ತ ಕಾರ್ಯದರ್ಶಿ ಪೂರ್ಣೇಶ್, ಅಮ್ಮ ಫೌಂಡೇಷನ್ ಸದಸ್ಯರಾದ ಕೆರೆಗದ್ದೆ ಮಂಜುಳಾ, ರಂಜಿತ, ನಾಗರಮಕ್ಕಿ ಶಾಲೆಯ ಎಸ್‌ಡಿಎಂಸಿ ಸದಸ್ಯ ಗಣಪತಿ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣ ಇದ್ದರು. ಶಾಲೆಯ ಶಿಕ್ಷಕ ರಾಜಶೇಖರಯ್ಯ ಸ್ವಾಗತಿಸಿದರು. ಶಾಲೆಯ 23 ಮಕ್ಕಳಿಗೆ ನೋಟು ಬುಕ್ ವಿತರಿಸಲಾಯಿತು.