ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಗರ್ಭ ಧರಿಸಿ ಮಗುವಿಗೆ ಜನ್ಮ ನೀಡುವುದು ಹೆಣ್ಣಿನ ಜೀವನದಲ್ಲೊಂದು ಪ್ರಮುಖ ಘಟ್ಟ. ಈ ಹಂತದಲ್ಲಿ ಆಕೆಯನ್ನು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಪೋಷಕರ ಜವಬ್ದಾರಿಯಾಗಿರುತ್ತದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಲವೀಶ್ ಒರಡಿಯಾ ಹೇಳಿದ್ದಾರೆ.ತಾಲೂಕಿನ ದೋರನಹಳ್ಳಿ ಗ್ರಾಮದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಗರ್ಭಿಣಿಯರ ಆರೋಗ್ಯಕ್ಕೆ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅಗತ್ಯ. ಗರ್ಭಾವಸ್ಥೆಯಲ್ಲಿ, ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಮುಖ್ಯ. ಈ ಸಮಯದಲ್ಲಿ, ಆಹಾರ, ವ್ಯಾಯಾಮ, ವೈದ್ಯಕೀಯ ತಪಾಸಣೆಗಳು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ ಎಂದರು.
ಸರಿಯಾದ ವಯಸ್ಸಿಗೆ ಮದುವೆಯಾಗಬೇಕು, ಬಾಲ್ಯ ವಿವಾಹವಾದರೆ ಕಾನೂನು ಒಪ್ಪುವುದಿಲ್ಲ. ಮದುವೆಯಾದ ಮೇಲೆ ತಾಯಿಯಾಗುವ ಶಕ್ತಿ ಸಾಮರ್ಥ್ಯ ಹೆಣ್ಣಿಗೆ ಮಾತ್ರ ದೇವರು ಕರುಣಿಸಿದ್ದಾನೆ. ಗರ್ಭಿಣಿಯಾಗಿದ್ದಾಗ ಖುಷಿ, ಖುಷಿಯಾಗಿ ಇದ್ದರೆ ಹೆರಿಗೆ ಸುಲಭವಾಗುತ್ತದೆ. ಒಂದು ಮಗುವಿನಿಂದ ಮತ್ತೊಂದು ಮಗುವಿನ ಜನನಕ್ಕೆ ಕನಿಷ್ಟ ಎರಡು ವರ್ಷ ಅಂತರ ಕಾಯ್ದುಕೊಳ್ಳ ಬೇಕು, ಅಂದಾಗ ಹುಟ್ಟುವ ಮಕ್ಕಳು ಆರೋಗ್ಯವಾಗಿ ಇರುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಇದೇ ಮೊದಲು ವಿನೂತನ ಕಾರ್ಯಕ್ರಮ ಕಂಡು ನನಗೆ ಬಹಳ ಸಂತಸವಾಗಿದೆ ಎಂದರು.ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್ವರಿ ಗುತ್ತೇದಾರ ಮಾತನಾಡಿ, ಗರ್ಭಿಣಿಯರು ಮೊದಲಿಗೆ ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಸೇವನೆ ಮಾಡುವುದು ಮುಖ್ಯ. ಗರ್ಭಾವಸ್ಥೆಯ ಅವಧಿಯಲ್ಲಿ ಪ್ರತಿನಿತ್ಯ ನಾರಿನಂಶ ಹೆಚ್ಚಾಗಿರುವ ಆಹಾರಗಳನ್ನು ಸೇವನೆ ಮಾಡಬೇಕು. ವಿವಿಧ ಬೇಳೆಕಾಳುಗಳು, ಹಸಿರು ತರಕಾರಿಗಳು, ತಾಜಾ ಸೊಪ್ಪುಗಳು ಮತ್ತು ಗೋಧಿ ಯಥೇಚ್ಛವಾಗಿ ನಾರಿನಂಶವನ್ನು ಒಳಗೊಂಡಿವೆ. ಗರ್ಭಿಣಿಯರು ಒಂದೇ ಬಾರಿಗೆ ಹೊಟ್ಟೆ ತುಂಬುವಷ್ಟು ಆಹಾರಗಳನ್ನು ಸೇವಿಸಬಾರದು. ಅದರ ಬದಲಿಗೆ ದಿನಕ್ಕೆ 4 ರಿಂದ 5 ಬಾರಿ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸಿ. ಹೀಗೆ ಮಾಡುವುದರಿಂದ ತಿಂದ ಆಹಾರವು ನಿಧಾನವಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆಗೆ ಹೊರೆಯಾಗುವುದಿಲ್ಲ ಎಂದರು.
ಈ ವೇಳೆ 50ಕ್ಕೂ ಹೆಚ್ಚು ಗರ್ಭಿಣಿಯರಿಗೆ ಹಣ್ಣು, ಕುಪ್ಪಸ, ಹೂ, ಸಿಹಿ ಪದಾರ್ಥಗಳ ಕೊಟ್ಟು ಆರತಿ ಮಾಡಿ ಉಡಿ ತುಂಬಿ ಸಂಭ್ರಮಿಸಲಾಯಿತು.ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ, ಡಾ.ಮಲ್ಲಪ್ಪ ನಾಯ್ಕಲ್, ಡಾ.ಗಂಗಾಧರ ಚಟ್ರಿಕಿ, ಡಾ.ಗೀತಾ ಪಾಟೀಲ್, ಡಾ.ಅರುಣ್ ಪಾಟೀಲ್, ಡಾ.ಅಕ್ಷಯ್ ತಳವಾಡಿ, ಡಾ.ಭಾಗ್ಯಶ್ರೀ ಪಾಟೀಲ್, ಡಾ.ಸೀಜಲ್, ಆಶಾ ಕಾರ್ಯಕರ್ತೆಯರಾದ ಅಮೃತಾ ಹುಡೇದ್, ನೂರಜಾ ಪಟೇಲ್, ಯಲ್ಲಮ್ಮ ಅನವಾರ, ಶಶಿಕಲಾ, ಲಾಲೆಮ್ಮ, ಶರಣಮ್ಮ, ಮೀನಾಕ್ಷಿ ಸುರಪುರ, ಸಾವಿತ್ರಿ ಮಾಡಗಿ, ಸವಿತಾ, ಅಮೃತಾ, ಕಾಳಮ್ಮ, ಚಂದಮ್ಮ ಇತರರು ಇದ್ದರು.