ಸಾರಾಂಶ
ಹರಪನಹಳ್ಳಿ: ಪೋಷಕರು ತಮ್ಮ ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.ಪಟ್ಟಣದ ಹೊರವಲಯದಲ್ಲಿರುವ ಪ್ರಕೃತಿ ವಿದ್ಯಾಸಂಸ್ಥೆಯ ಪರ್ಲ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ ಸರಸ್ವತಿ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ, ದೀಪ ಬೆಳಗಿ ಅವರು ಮಾತನಾಡಿದರು.
ಮಕ್ಕಳ ಮೇಲೆ ಪೋಷಕರು ಒತ್ತಡ ಹಾಕಬಾರದು. ಶಿಕ್ಷಣ ಅಂದರೆ ಶೇ.90 ಅಂಕ ಪಡೆಯುವುದು ಅಲ್ಲ. ಉತ್ತಮ ಸಂಸ್ಕಾರ, ಸಂಸ್ಕೃತಿ ಕೊಡಿಸಬೇಕು. ನಾನು ಸಹ ಅತ್ಯಂತ ಕಠಿಣ ಪರಿಶ್ರಮದಿಂದ ಇಂತಹ ಹುದ್ದೆಗೆ ಅಲಂಕರಿಸಿ ನಿಮ್ಮ ಸೇವೆ ಮಾಡುತ್ತಿದ್ದೇನೆ. ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವತ್ತ ಪ್ರಯತ್ನಿಸಿ ಎಂದು ಕಿವಿಮಾತು ಹೇಳಿದರು.ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಶಾಲೆಯಲ್ಲಿನ ಶಿಕ್ಷಕರು ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಹೊರತೆಗೆಯಬೇಕು ಇದಕ್ಕೆ ಪೋಷಕರು ಸಹ ಬೆಂಬಲ ನೀಡಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಮಾತನಾಡಿ, ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮಕ್ಕಳು ಪಾಲಕರು ಮತ್ತು ಶಿಕ್ಷಕರು ಪಾತ್ರವನ್ನು ಕಥೆಯ ಮೂಲಕ ವಿವರಿಸಿ ಸಭಿಕರ ಮನ ಗೆದ್ದರು.ಪರ್ಲ್ ಪಬ್ಲಿಕ್ ಶಾಲೆಯ ಗೌರವಾಧ್ಯಕ್ಷ ಶಶಿಧರ್ ಪೂಜಾರ್ ಮಾತನಾಡಿ, ನಮ್ಮ ಶಾಲೆಯಲ್ಲಿ ಓದು ಬರಹದ ಜೊತೆ ಜೊತೆಗೆ ಕಲೆ, ಸಾಂಸ್ಕೃತಿಕ, ಕ್ರೀಡೆಗಳಿಗೂ ಪ್ರಾಶಸ್ತ್ಯ ನೀಡುತ್ತಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.
ವಿಜಯನಗರ ಸಾಮ್ರಾಜ್ಯದ ವಂಶಸ್ಥೆ ರತ್ನ ಶ್ರೀ ಕೃಷ್ಣದೇವರಾಯ ಮಾತನಾಡಿ, ಮಕ್ಕಳಿಗೆ ಪಾಲಕರ ಸಮಯಕ್ಕಿಂತ ಅಮೂಲ್ಯವಾದ ಉಡುಗೊರೆ ಬೇರೊಂದಿಲ್ಲ. ಒತ್ತಡದ ಜೀವನದ ನಡುವೆ ಪಾಲಕರು ತಮ್ಮ ಸಮಯ ನೀಡುವುದು ಮರೆತು ಬಿಟ್ಟಿದ್ದಾರೆ. ಪಾಲಕರೇ ನೀವು ನಿಮ್ಮ ಮಕ್ಕಳಿಗೆ ಕೊಡಬಹುದಾದ ಅಮೂಲ್ಯವಾದ ಉಡುಗೊರೆ ಎಂದರೆ ಅದು ನಿಮ್ಮ ಸಮಯವಾಗಿದೆ. ಬಾಲ್ಯದಲ್ಲಿ ತಂದೆ ತಾಯಿಗಳು ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡಿದರೆ ಭವಿಷ್ಯದಲ್ಲಿ ಮಕ್ಕಳು ಯಾವುದೇ ದೇಶಕ್ಕೆ ತೆರಳಿದರೂ ನಮ್ಮ ಸಂಸ್ಕೃತಿಯನ್ನು ಬಿಡುವುದಿಲ್ಲ ಎಂದು ಹೇಳಿದರು.ಪ್ರಾಚಾರ್ಯ ಸುಮಾ ನಾಗೇಶ್ ಉಪ್ಪಿನ್ ಶಾಲೆ ನಡೆದು ಬಂದ ಹಾದಿಯನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಪೂಜಾರ ವಹಿಸಿದ್ದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸಿಲ್ದಾರ ಗಿರೀಶ್ ಬಾಬು, ಉಪಾಧ್ಯಕ್ಷ ನಾಗೇಶ್ ಉಪ್ಪಿನ್, ನಿರ್ದೇಶಕರಾದ ಚನ್ನೇಶ ಬಣಕಾರ್ ಮಾಲತೇಶ ಚಳಗೇರಿ, ಬಸವರಾಜ್ ಹುಲ್ಲತ್ತಿ, ವಿರೂಪಾಕ್ಷಪ್ಪ ಕೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಇದ್ದರು.ಹರಪನಹಳ್ಳಿಯ ಪರ್ಲ್ ಪಬ್ಲಿಕ್ ಶಾಲೆಯ ವಾರ್ಷೀಕೋತ್ಸವನ್ನು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಉದ್ಘಾಟಿಸಿದರು.