ಪೋಷಕರು ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು: ಡಾ.ನಾ. ಸೋಮೇಶ್ವರ

| Published : Jan 04 2025, 12:34 AM IST

ಸಾರಾಂಶ

ವಿವಿಧ ವಿಭಾಗಗಳಲ್ಲಿ ಉನ್ನತ ಸಾಧನೆ ಮೆರೆದ 254 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಹಣ ಸಂಪಾದಿಸುವುದು, ಪದವಿ ಪಡೆದುಕೊಳ್ಳುವುದು ಮಾತ್ರ ಶಿಕ್ಷಣದ ಉದ್ದೇಶವಲ್ಲ. ನಮ್ಮನ್ನು ನಾವು ಸವ್ಯಸಾಚಿಯನ್ನಾಗಿ ಮಾಡುವುದೇ ಶಿಕ್ಷಣದ ಉದ್ದೇಶ ಎಂದು ಕ್ವಿಜ್ ಮಾಸ್ಟರ್, ಲೇಖಕ ಡಾ.ನಾ. ಸೋಮೇಶ್ವರ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಮೂಡುಬಿದಿರೆಯ ಸ್ಕೌಟ್ಸ್- ಗೈಡ್ಸ್ ಕನ್ನಡ ಭವನದ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇನ್ನೊಬ್ಬರ ಕುಶಲ ಕ್ಷೇಮ ವಿಚಾರಿಸುವುದು ಭಾರತೀಯ ಸಂಸ್ಕೃತಿ. ಪೋಷಕರು ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು. ಇಂತಹ ಮೂಲಭೂತ ವಿಚಾರಗಳನ್ನು ಮಕ್ಕಳಿಗೆ ಕಲಿಸುವುದು ಪೋಷಕರ ಕರ್ತವ್ಯ ಮಾತ್ರವಲ್ಲ ಧರ್ಮವೂ ಆಗಿದೆ ಎಂದರು.

ಕಾಲೇಜಿನ ಉಪ ಪ್ರಾಂಶುಪಾಲೆ ಪಿ.ಎನ್. ಜಾನ್ಸಿ ಮಾತನಾಡಿ, ಸಮಾಜ ನಮಗೆ ಏನು ಕೊಟ್ಟಿದೆ. ನಾವು ಏನನ್ನು ಕಲಿತಿದ್ದೇವೆ ಎಂದು ಯೋಚಿಸಿ ಎಂದರು.ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಮಾತನಾಡಿ, ನಾವು ವಿದ್ಯಾವಂತರಾಗಿ ನಮ್ಮ ತಂದೆ ತಾಯಿಯನ್ನು ನೋಡಿಕೊಳ್ಳದಿದ್ದರೆ ಆ ವಿದ್ಯೆಗೆ ಏನು ಬೆಲೆ ಎಂಬುದನ್ನು ಯೋಚಿಸಬೇಕು ಎಂದು ಹೇಳಿದರು. ಡಾ.ನಾ. ಸೋಮೇಶ್ವರ ಅವರನ್ನು ಸನ್ಮಾನಿಸಲಾಯಿತು. ವಿವಿಧ ವಿಭಾಗಗಳಲ್ಲಿ ಉನ್ನತ ಸಾಧನೆ ಮೆರೆದ 254 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಇದ್ದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಷ್ ಚಿಪ್ಣೂಳ್ಕರ್ ಸ್ವಾಗತಿಸಿದರು. ಕಲಾ ವಿಭಾಗದ ಡೀನ್ ಕೆ. ವೇಣುಗೋಪಾಲ್ ಶೆಟ್ಟಿ ನಿರೂಪಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸುನಿಲ್ ವಂದಿಸಿದರು.