ತಂದೆ-ತಾಯಿ, ಶ್ರೀಗುರು ಜೀವಂತ ದೇವರು

| Published : Apr 02 2024, 01:00 AM IST

ಸಾರಾಂಶ

ಶಾಸ್ತ್ರಗಳ ಪ್ರಕಾರ ಒಟ್ಟು ೩೩ ಕೋಟಿ ದೇವತೆಗಳಿದ್ದರೂ ಸಹ ಯಾವ ದೇವರೂ ಮಾತನಾಡುವುದಿಲ್ಲ. ಆದರೆ ನಮ್ಮ ಇಹದ ಬದುಕಿನಲ್ಲಿರುವ ತಂದೆ-ತಾಯಿ ಮತ್ತು ಶ್ರೀಗುರು ಮಾತ್ರ ಜೀವಂತ ದೇವರು.

ಧಾರವಾಡ:

ಶಾಸ್ತ್ರಗಳ ಪ್ರಕಾರ ಒಟ್ಟು ೩೩ ಕೋಟಿ ದೇವತೆಗಳಿದ್ದರೂ ಸಹ ಯಾವ ದೇವರೂ ಮಾತನಾಡುವುದಿಲ್ಲ. ಆದರೆ ನಮ್ಮ ಇಹದ ಬದುಕಿನಲ್ಲಿರುವ ತಂದೆ-ತಾಯಿ ಮತ್ತು ಶ್ರೀಗುರು ಮಾತ್ರ ಜೀವಂತ ದೇವರು ಎಂಬ ಭಕ್ತಿಯ ಗೌರವಕ್ಕೆ ಭಾಜನರಾಗಿದ್ದಾರೆ ಎಂದು ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಪ್ರಥಮ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಮಹಾದಾಸೋಹಿ ಶ್ರೀಕಲಬುರ್ಗಿ ಶರಣ ಬಸವೇಶ್ವರರ ಪುರಾಣ ಪ್ರವಚನದ ಸಂದರ್ಭದಲ್ಲಿ ವಿಶೇಷ ಆಧ್ಯಾತ್ಮಿಕ ಉಪನ್ಯಾಸ ನೀಡಿದರು.

ಪೂರ್ವಜರು ತಂದೆ-ತಾಯಿ ಮತ್ತು ಶ್ರೀಗುರುವಿನ ಮಹತ್ವ ಅರಿತುಕೊಂಡು ಅವರಿಗೆ ದೇವರ ಸ್ಥಾನ ನೀಡಿದ್ದಾರೆ. ಅದಕ್ಕೆಂದೇ ‘ಮಾತೃ ದೇವೋಭವ’, ‘ಪಿತೃ ದೇವೋಭವ’ ಹಾಗೂ ‘ಆಚಾರ್ಯ ದೇವೋಭವ’ ಎಂದು ಕರೆದಿದ್ದನ್ನು ಮರೆಯುವಂತಿಲ್ಲ. ತಾಯಿಯ ಕಾರುಣ್ಯ, ವಾತ್ಸಲ್ಯ, ಅನುರಾಗಕ್ಕೆ ಎಂದೂ ಬೆಲೆಕಟ್ಟಲಾಗದು. ಅವಳ ಕೈತುತ್ತು, ಕಲಿಸುವ ಮೊದಲ ಆಟ-ಪಾಠಗಳು ನಮ್ಮ ಸಾಧನೆಗೆ ಮೆಟ್ಟಿಲುಗಳಾಗುತ್ತವೆ. ತ್ಯಾಗಮಯಿ ತಂದೆ ತನ್ನ ಬಯಕೆಗಳನ್ನು ಬದಿಗಿಟ್ಟು ಒಡಲ ಕುಡಿಗಳಿಗೆ ಮಾಡುವ ಸಮರ್ಪಣೆ ವಿಶಿಷ್ಟವಾದದ್ದು. ಇಂದು ಹಡೆದ ಮಕ್ಕಳೇ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳಿಸುತ್ತಿರುವುದು ಬಹಳ ನೋವಿನ ಸಂಗತಿ ಎಂದರು.

ವೀರಶೈವ ಸಿದ್ಧಾಂತದಲ್ಲಿ ಇಷ್ಟಲಿಂಗವನ್ನು ಕರುಣಿಸಿ ಶಿವಸಾನ್ನಿಧ್ಯದ ಅನುಸಂಧಾನಕ್ಕೆ ಮಂತ್ರದೀಕ್ಷೆ ನೀಡಿ ಇಹದ ಜೀವನ ವಿಧಾನದ ಹೆಜ್ಜೆಗಳಿಗೆ ಬೆಳಕು ತುಂಬುವ ಕೆಲಸ ಮಾಡುವ ಶ್ರೀಗುರು ಜೀವಂತ ದೇವರಾಗಿದ್ದಾರೆ. ಈ ಗುರುಸಾನ್ನಿಧ್ಯದಲ್ಲಿ ಹೊಂದುವ ಭಕ್ತಿಯ ಬದ್ಧತೆಯು ಮುಕ್ತಿಯ ಮಹಾಬೆಳಗನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಶ್ರೀಗಳು ನುಡಿದರು.

ಪುರಾಣ ಪ್ರವಚನ ನೀಡಿದ ಸೂಗೂರು ಶ್ರೀರುದ್ರಮುನೀಶ್ವರ ಸಂಸ್ಥಾನ ಹಿರೇಮಠದ ಡಾ. ಚೆನ್ನರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಅರಳಗುಂಡಿಗೆ ಸಾಲೋಕ್ಯ ಮನೆತನದ ಆದಯ್ಯ ಮತ್ತು ಮಡಿಯಮ್ಮ ಆದರ್ಶ ದಂಪತಿಗಳು. ಗುರು, ಲಿಂಗ, ಜಂಗಮ ಸೇವೆಗೆ ನಿರಂತರ ತೆರೆದುಕೊಂಡವರು. ಬಡವರು, ಅನಾಥರು, ನಿರ್ಗತಿಕರು, ವಿಕಲಚೇತನರ ಹಸಿವು-ನೋವುಗಳಿಗೆ ಸ್ಪಂದಿಸಿ ಹೊಟ್ಟೆ ತುಂಬ ಊಟ ನೀಡಿ ಖುಷಿಪಡುವ ಜಾಯಮಾನವನ್ನು ಈ ದಂಪತಿಗಳು ಹೊಂದಿದ್ದರು. ಆದರೆ ಈ ದಂಪತಿಗಳಿಗೆ ಸಂತಾನವೇ ಇರಲಿಲ್ಲ. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎನ್ನುವ ರೀತಿಯಲ್ಲಿ ಈ ದಂಪತಿಗಳಿಗೆ ಒಂದು ದಿನ ಶಿವನ ಕೃಪಾಕಾರುಣ್ಯವು ಪ್ರಾಪ್ತವಾಗುತ್ತದೆ ಎಂದರು.

ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವಿರೂಪಾಕ್ಷಪ್ಪ ನವಲಗುಂದ, ಬಸಪ್ಪ ಯಡಳ್ಳಿ, ಮಲ್ಲಪ್ಪ ಕುಸೂಗಲ್ಲ, ಬಸವಣ್ಣೆಪ್ಪ ಪೂಜಾರ ಇದ್ದರು.