ಪಾಲಕರು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ನೀಡದೆ ಕಾನ್ವೆಂಟ್ ಶಾಲೆಗಳಿಗೆ ಕಳುಹಿಸಿದ್ದು, ಇಂಗ್ಲಿಷ್ ಸಂಸ್ಕೃತಿ ಮಿತಿ ಮೀರಿದೆ. ಮನೆಯಿಂದಲೇ ಕನ್ನಡ ಉಳಿಸಿ, ಬೆಳೆಸುವ ಕಾರ್ಯವಾಗಬೇಕಿದೆ.
ಧಾರವಾಡ:
ಪಾಲಕರು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ನೀಡದೆ ಕಾನ್ವೆಂಟ್ ಶಾಲೆಗಳಿಗೆ ಕಳುಹಿಸಿದ್ದು, ಇಂಗ್ಲಿಷ್ ಸಂಸ್ಕೃತಿ ಮಿತಿ ಮೀರಿದೆ. ಮನೆಯಿಂದಲೇ ಕನ್ನಡ ಉಳಿಸಿ, ಬೆಳೆಸುವ ಕಾರ್ಯವಾಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು 71ನೇ ರಾಜ್ಯೋತ್ಸವ ನಿಮಿತ್ತ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ ಹಾಗೂ ನಾಡನ್ನು ಬೆಳೆಸಿಕೊಂಡು ಹೋಗುವ ಹೆಚ್ಚಿನ ಜವಾಬ್ದಾರಿ ಯುವಕರ ಮೇಲಿದೆ. ಈ ಕುರಿತು ಸರಿಯಾದ ಮಾರ್ಗದರ್ಶನ ನೀಡುವಲ್ಲಿ, ಪ್ರಭಾವ ಬೀರುವಲ್ಲಿ ಹಿರಿಯರು ಮಾರ್ಗದರ್ಶನ ಮಾಡಬೇಕು. ಇಡೀ ರಾಜ್ಯದಲ್ಲಿಯೇ ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡಪರ ಕಾರ್ಯಚಟುವಟಿಕೆಗಳನ್ನು ಕೇವಲ ನವೆಂಬರ್ ಒಂದನೇ ತಾರೀಖಿಗೆ ಸೀಮಿತಗೊಳಿಸದೆ ನಿರಂತರವಾಗಿ ಇಡೀ ತಿಂಗಳು ರಚನಾತ್ಮಕ, ವೈವಿಧ್ಯಮಯ ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಶ್ಲಾಘನೀಯ ಎಂದರು.
ತಬಲಾ ಸಾಧಕ ಪಂ. ರಘುನಾಥ ನಾಕೋಡ ಅವರಿಗೆ ಪುರಸ್ಕಾರ ಫಲಕ ನೀಡಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ಸಂಗೀತವು ನಿರಂತರ ಸಾಧನೆಯಿಂದ ಒಲಿಯುವಂಥ ಕಲೆಯಾಗಿದೆ. ಸಂಗೀತ ಎಂದರೆ ಸಮುದ್ರದಷ್ಟು ವಿಶಾಲ ಎಂದು ಹೇಳಿದರು.ಪಂಚಸಪ್ತಮಿ ಸಾಂಸ್ಕೃತಿಕ ಬಳಗದ ಸದಾನಂದ ತಾವಡೆ ಅವರಿಂದ ಸುಗಮ ಸಂಗೀತ, ವಿಜಯಪುರದ ಹಾಸ್ಯ ಭಾಷಣಕಾರ ಭಾಗೇಶ ಮುರಡಿ ಅವರಿಂದ ಹಾಸ್ಯ, ತನುಶ್ರೀ ಜುಮ್ಮನವರ ಅವರಿಂದ ನೃತ್ಯ ಹಾಗೂ ಕೊತಬಾಳದ ಅರುಣೋದಯ ಸಾಂಸ್ಕೃತಿಕ ಕಲಾ ತಂಡದದಿಂದ ನಾಡು-ನುಡಿ ಗೀತಗಾಯನ ನಡೆಯಿತು.
ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಒಡ್ಡೀನ ಸನ್ಮಾನ ಫಲಕ ವಾಚಿಸಿದರು. ಡಾ. ಮಹೇಶ ಧ. ಹೊರಕೇರಿ ನಿರೂಪಿಸಿ, ಡಾ. ಜಿನದತ್ತ ಹಡಗಲಿ ವಂದಿಸಿದರು.