ಮಗನಿಗಾಗಿ ಸಾಲ ಮಾಡಿ ಬೀದಿ ಪಾಲಾದ ತಂದೆತಾಯಿ

| Published : Mar 16 2025, 01:48 AM IST

ಸಾರಾಂಶ

ಮಗನಿಗಾಗಿ ವೃದ್ಧ ದಂಪತಿ ಮನೆ ಮೇಲೆ ಸಾಲ ಮಾಡಿ, ಮರುಪಾವತಿಸದ ಕಾರಣ ಈಗ ರಾತ್ರೋರಾತ್ರಿ ಬೀದಿಗೆ ಬಿದ್ದಿರುವ ಅಮಾನವೀಯ ಘಟನೆ ವಿಜಯಪುರದ ಆಲಕುಂಟೆ ನಗರದಲ್ಲಿ ಕಂಡುಬಂದಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಮಗನಿಗಾಗಿ ವೃದ್ಧ ದಂಪತಿ ಮನೆ ಮೇಲೆ ಸಾಲ ಮಾಡಿ, ಮರುಪಾವತಿಸದ ಕಾರಣ ಈಗ ರಾತ್ರೋರಾತ್ರಿ ಬೀದಿಗೆ ಬಿದ್ದಿರುವ ಅಮಾನವೀಯ ಘಟನೆ ವಿಜಯಪುರದ ಆಲಕುಂಟೆ ನಗರದಲ್ಲಿ ಕಂಡುಬಂದಿದೆ.

ವೀರಭದ್ರ, ಬಾಗಮ್ಮ ಹಡಪದ ದಂಪತಿಯೇ ಈಗ ಬೀದಿಪಾಲಾದ ವೃದ್ಧ ದಂಪತಿ. ಮಗನಿಗೋಸ್ಕರ ಐದು ವರ್ಷದ ಹಿಂದೆ ಐದು ಲಕ್ಷ ಸಾಲ ಮಾಡಿದ್ದರು. ಹಿರಿಯ ಮಗ ಬಸವರಾಜ್ ಹಡಪದ ಉದ್ಯೋಗಕ್ಕಾಗಿ ದಂಪತಿ ಈ ಸಾಲ ಮಾಡಿದ್ದರು. ಸಾಲ ತೀರಿಸಲು ಮಗ ಬಸವರಾಜ್ ನಿರಾಕರಿಸಿದ್ದು, ಈಗ ಕೋರ್ಟ್ ಮನೆ ಸೀಜ್ ಮಾಡುವಂತೆ ಆದೇಶ ನೀಡಿದೆ‌. ಇದರಿಂದ ಮನೆಯಿಂದ ದಂಪತಿ ಹೊರಗೆ ಬಂದಿದ್ದಾರೆ.

5 ವರ್ಷಗಳ ಹಿಂದೆ ಮಾಡಿದ್ದ ಸಾಲ:ಐದು ವರ್ಷಗಳ ಹಿಂದೆ ಮಾಡಿದ್ದ ಸಾಲಕ್ಕೆ ಪ್ರತಿ ತಿಂಗಳು ₹14 ಸಾವಿರ ಕಟ್ಟಬೇಕಿತ್ತು. ಜನ ಸ್ಮಾಲ್ ಫೈನಾನ್ಸ್‌ಗೆ ಹಣ ನೀಡಬೇಕಿತ್ತು. ಆದರೆ ಹಿರಿಯ ಮಗ ಸರಿಯಾಗಿ ಸಾಲ ತುಂಬಲಿಲ್ಲ. ಫೈನಾನ್ಸ್ ಸಿಬ್ಬಂದಿ ವೃದ್ಧ ದಂಪತಿ ಬಳಿ ಹಣ ಪಾವತಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಕಳೆದ ಒಂದು ವರ್ಷದವರೆಗೆ ಸಾಲ ತುಂಬುತ್ತ ಬಂದಿದ್ದರು. ವರ್ಷದ ಈಚೆಗೆ ದುಡಿಯಲು ಸಾಧ್ಯವಾಗದ ಕಾರಣ ಬಾಕಿ ಹಣ ತುಂಬುವುದನ್ನೇ ನಿಲ್ಲಿಸಿಬಿಟ್ಟಿದ್ದರು.

ಇದರಿಂದ ಫೈನಾನ್ಸ್ ಸಂಸ್ಥೆ ಕೋರ್ಟ್‌ಗೆ ಮೊರೆ ಹೋಗಿ ಮನೆ ಸೀಜ್ ಮಾಡಿಸಿದ್ದಾರೆ. ಮನೆಯ ಮುಂದೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ಪರಿಣಾಮ ವೃದ್ಧ ದಂಪತಿ ಕಳೆದ ನಾಲ್ಕು ದಿನಗಳಿಂದ ಬೀದಿ ಮೇಲೆ ವಾಸವಿದ್ದಾರೆ. ಮನೆಗೆ ಬೀಗ ಜಡಿದಿರುವ ಫೈನಾನ್ಸ್​, ಒಳಗೆ ಹೋದರೆ ದಂಡ ವಿಧಿಸುವುದಾಗಿ ಹೇಳಿದೆ ಎಂದು ನೋಟಿಸ್ ಅಂಟಿಸಿದ್ದಾರೆ.

ಈ ದಂಪತಿಗೆ ಇಬ್ಬರು ಗಂಡು ಮಕ್ಕಳು. ದೊಡ್ಡ ಮಗ ಹೆತ್ತವರಿಂದ ಸಾಲ ಮಾಡಿಸಿ ಬೇರೆ ಮನೆ ಮಾಡಿಕೊಂಡು ಆರಾಮಾಗಿದ್ದಾನೆ. ಇನ್ನೊಬ್ಬ ಕಿರಿಯ ಮಗ ಕುಡುಕ. ಮನೆ ಸೀಜ್ ಮಾಡಿದ ವಿಚಾರ ತಿಳಿಸಿದಾಗ, ಸಾಲ ತುಂಬಲು ನನ್ನ ಬಳಿ ಆಗಲ್ಲ. ಬೇಕಿದ್ದರೆ ಊಟ ತಂದು ಕೊಡ್ತೀನಿ ಎಂದಿದ್ದಾನಂತೆ ಎಂದು ದಂಪತಿ ಕಣ್ಣೀರು ಹಾಕಿದರು.

ಮಗ ಚೆನ್ನಾಗಿರ್ಲಿ, ಒಳ್ಳೆ ಉದ್ಯೋಗ ಇರ್ಲಿ, ಚೆನ್ನಾಗ ಮಾಡ್ಕೊಂಡು ತಿನ್ಲಿ ಅಂತಾ ಐದು ವರ್ಷದ ಹಿಂದೆ ಐದು ಲಕ್ಷ ಸಾಲ ಮಾಡಿಕೊಟ್ಟೆ. ಒಂದು ವರ್ಷ ಆಯ್ತು. ಹಣ ಕಟ್ಟೋಕೆ ಆಗ್ಲಿಲ್ಲ. ಈ ಮುದುಕ ಒಂದು ಲಕ್ಷ ಕೊಟ್ಟಾನ್ರಿ, ನಾನು ದುಡಿದು ದುಡಿದು ಕೊಟ್ಟೇನ್ರಿ. ಅವನು ಕಟ್ಯಾನೋ? ಬಿಟ್ಯಾನೋ ದೇವ್ರಿಗೆ ಗೊತ್ರಿ. ಮಗ ಚೆನ್ನಾಗಿರ್ಲಿ ಅಂತಾ ನಾವು ಸಾಲ ತೀರ್ಸಿವಿ. ಈಗ ನಮ್ಮ ಕೈ ನಿಂತಿದೆ. ಕೆಲಸ ಮಾಡಲು ಶಕ್ತಿ ಇಲ್ಲ. ಅವ್ನ ಹತ್ರ ಹೇಳಿದ್ರೆ ಕಟ್ಟಲ್ಲ ಅಂತಾನೆ. ನಾಲ್ಕು ದಿನ ಆಯ್ತು ಹೊರಗೆ ಬಿದ್ದಿವ್ರಿ ನೋಡಿ. ಒಳಗೆ ಹೋದ್ರ ದಂಡ ಹಾಕ್ತೀವಿ ಅಂದಾರ. ನಾವು ರೋಡ್​​ ಮ್ಯಾಲೇ ಕೂತೆವ್ರಿ.

ವೀರಭದ್ರ, ಬಾಗಮ್ಮ ಹಡಪದ ದಂಪತಿ. ವಿಜಯಪುರ.