ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಪರಂಪರಾಗತವಾಗಿ ಬೆಳದು ಬಂದಿರುವ ದೇಶಿಯ ಶ್ರೀ ಕೃಷ್ಣ ಪಾರಿಜಾತ ಕಲೆ ಮತ್ತು ಸಂಸ್ಕೃತಿ ಅವನತಿಯಾದರೆ ನಾಡು ಸಾಂಸ್ಕೃತಿಕವಾಗಿ ಬಡತನ ಅನುಭವಿಸುವಂತಾಗುತ್ತದೆ ಎಂದು ಮುದ್ದಾಪುರ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಸೋಮನಿಂಗಪ್ಪ ಪೂಜಾರ ಹೇಳಿದರು.ಸಮೀಪದ ಮುದ್ದಾಪುರ ಗ್ರಾಮದಲ್ಲಿ ಶ್ರೀ ಸರಸ್ವತಿ (ಪ.ಜಾ) ಮಹಿಳಾ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರ ಸಹಯೋಗದಲ್ಲಿ ನಡೆದ ಶ್ರೀ ಕೃಷ್ಣ ಪಾರಿಜಾತ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರನ್ನು ಮತ್ತು ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಗಾಗ ಶ್ರೀ ಕೃಷ್ಣ ಪಾರಿಜಾತ ಕಲಾ ಪ್ರದರ್ಶನಗಳನ್ನು ಆಯೋಜಿಸುವ ಅಗತ್ಯವಿದೆ. ಜಾತ್ರೆ, ಉತ್ಸವಗಳ ಅಂಗವಾಗಿ ಗ್ರಾಮೀಣ ಕಲೆಗಳ ಪ್ರದರ್ಶನ ಹಮ್ಮಿಕೊಳ್ಳುವುದರಿಂದ ನವ ಪೀಳಿಗೆಯಲ್ಲೂ ಆ ಕಲೆಗಳ ಕುರಿತು ಆಸ್ತಿ ಮತ್ತು ಅರಿವು ಮೂಡುತ್ತದೆ ಎಂದರು.
ಉತ್ತರ ಕರ್ನಾಟಕದ ಸನತಾನ ಹಿಂದೂ ಧರ್ಮದ ದಿಕ್ಸೂಚಿ ಭಾಷಣಕಾರರಾದ ಭಾಗ್ಯಾಗೌಡ ಚಡಚಣ ಮಾತನಾಡಿ, ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಯಿಂದ ಮನಸ್ಸಿಗೆ ಸಮಾಧಾನ ಲಭಿಸುತ್ತದೆ. ಪಾರಿಜಾತ ಕಲೆಗಳನ್ನು ಆಸ್ವಾದಿಸುವುದರಿಂದ ಆರೋಗ್ಯವಂತ ಬದುಕು ನಡೆಸಲು ಅನುಕೂಲವಾಗುತ್ತದೆ. ಆಧುನಿಕ ಹೆಸರಿನಲ್ಲಿ ನಾವು ನಮ್ಮತನ ಮರೆಯುತ್ತಿರುವ ಕಾಲದಲ್ಲೂ ಗ್ರಾಮೀಣ ಪ್ರದೇಶದಲ್ಲಿ ಎಲೆಮರೆ ಕಾಯಿಯಂತಿರುವ ಪಾರಿಜಾತ ಕಲಾವಿದರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.ಕರ್ನಾಟಕ ರಾಜ್ಯದ ಬಯಲಾಟ ಆಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾದ ನಾರಾಯಣ ದುಂಡಪ್ಪ ಪತ್ತಾರರನ್ನು ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ಸಾನ್ನಿಧ್ಯ ಸೋಮಲಿಂಗಪ್ಪ ಪೂಜಾರ, ವರ್ಚಗಲ್ ಗ್ರಾಮದ ಜಗದೀಶ ಮಹಾಸ್ವಾಮೀಜಿ ವಹಿಸಿದ್ದರು. ಉದ್ಘಾಟಕರಾಗಿ ಅಶೋಕ ಪೂಜೇರಿ, ಅತಿಥಿಗಳಾಗಿ ಬಸವರಾಜ ನಾಯಕ, ಶಂಕರ ಭಜಂತ್ರಿ, ಅಜ್ಜಪ್ಪ ಪಡತಾರೆ, ವ್ಹಿ.ಅರ್.ತುಬಾಕಿ, ಶಿವು ಸಾಲಹಳ್ಳಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ರಂಗನಾಥ ತಳವಾರ, ವಿಠ್ಠಲ ಭಜಂತ್ರಿ, ಶಂಕರ ಮಾಳಿ, ಸಂಸ್ಥೆಯ ಅಧ್ಯಕ್ಷ ಅಶ್ವೀನಿ ಭಜಂತ್ರಿ ಹಾಗೂ ಮುದ್ದಾಪುರ ಗ್ರಾಮಸ್ಥರು ಇದ್ದರು.