ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಉತ್ತಮ ಮತದಾನ ನಡೆದಿದ್ದು ಜಿಲ್ಲೆಯಾದ್ಯಂತ 33 ಮತಗಟ್ಟೆಗಳಲ್ಲಿ ಒಟ್ಟು ಶೇ.69.75ರಷ್ಟು ಮತದಾನ ದಾಖಲಾಗಿದೆ.ಜಿಲ್ಲೆಯಲ್ಲಿ 16,622 ಪುರುಷ, 10,164 ಮಹಿಳೆಯರು ಸೇರಿ ಒಟ್ಟು 26,786 ಮತದಾರರಿದ್ದು, ಈ ಪೈಕಿ 12,124 ಪುರುಷರು, 6,558 ಮಹಿಳೆಯರು ಸೇರಿ ಒಟ್ಟು 18,682 ಮತದಾನ ಮಾಡಿದ್ದಾರೆ. ಕಮಲನಗರದ ಮತಗಟ್ಟೆ ಸಂ.43ರಲ್ಲಿ ಅತೀ ಹೆಚ್ಚು (ಶೇ.84.74) ಮತದಾನವಾಗಿದ್ದು ಬೀದರ್ ದಕ್ಷಿಣ ಕ್ಷೇತ್ರದ ಮತಗಟ್ಟೆ ಸಂ.64 (2) ಅತೀ ಕಡಿಮೆ ಮತದಾನ (ಶೇ.49.11)
ಕರ್ನಾಟಕ ವಿಧಾನ ಪರಿಷತ್‌ಗೆ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ ಸೋಮವಾರ ನಡೆದ ಮತದಾನ ಕೆಲ ಚಿಕ್ಕಪುಟ್ಟ ಘಟನೆ ಹೊರತುಪಡಿಸಿದರೆ ಶಾಂತಿಯುತ ವಾತಾವರಣದಲ್ಲಿ ನಡೆಯಿತು.ಜಿಲ್ಲೆಯ 33 ಮತಗಟ್ಟೆಗಳಲ್ಲಿ ಮತದಾರರಿಂದ ಮತ ಚಲಾವಣೆಗಾಗಿ ಬೆಳಗ್ಗೆಯಿಂದಲೇ ಸಾಲುಗಳು ಕಾಣಿಸಿದವು. ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನಕ್ಕೆ ಸಮಯ ನಿಗದಿಯಾಗಿತ್ತು. ಬೀದರ್ ನಗರದ ಮತಗಟ್ಟೆ ಸಂಖ್ಯೆ 63, 64ರಲ್ಲಿ ಬೆಳಗ್ಗೆಯಿಂದಲೇ ಮತದಾರರು ಸಾಲುಗಟ್ಟಿ ಮತ ಚಲಾವಣೆಗೆ ನಿಂತಿದ್ದರು.
ಈ ಚುನಾವಣೆಯಲ್ಲಿ ಬಿಜೆಪಿ ಅಮರನಾಥ ಪಾಟೀಲ್, ಕಾಂಗ್ರೆಸ್‌ನ ಡಾ.ಚಂದ್ರಶೇಖರ ಪಾಟೀಲ್ ಮಧ್ಯ ನೇರ ಹಣಾಹಣಿ ಸಾಧ್ಯತೆ ಕಂಡರೂ ಸ್ವತಂತ್ರ ಅಭ್ಯರ್ಥಿ ನಾರಾ ಪ್ರತಾಪರೆಡ್ಡಿ ಬಿರುಸಿನ ಸ್ಪರ್ಧೆ ತ್ರಿಕೋನ ಸ್ಪರ್ಧೆ ಸಾಧ್ಯತೆಯನ್ನೂ ಮುಂದಿಟ್ಟಿದೆ.ಮತಗಟ್ಟೆಯಲ್ಲಿ ಫೋಟೋ ಗದ್ದಲ:ಬೀದರ್ ನಗರದ ಮತಗಟ್ಟೆ ಸಂಖ್ಯೆ 64ರಲ್ಲಿ ಮತದಾರರೊಬ್ಬರು ತಮ್ಮ ಮೊಬೈಲ್‌ನಲ್ಲಿ ಮತದಾನದ ಫೋಟೋ ಕ್ಲಿಕಿಸುತ್ತಿದ್ದಾಗ ಅದಕ್ಕೆ ಅಧಿಕಾರಿಗಳು ಹಾಗೂ ವಿವಿಧ ಅಭ್ಯರ್ಥಿಗಳ ಏಜೆಂಟರು ಆಕ್ಷೇಪ ವ್ಯಕ್ತಪಡಿಸಿದಾಗ ಕೆಲ ನಿಮಿಷಗಳವರೆಗೆ ಮತದಾನ ನಿಲ್ಲಿಸಿದ ಪ್ರಸಂಗ ಕೂಡ ನಡೆದಿದೆ ಎಂದು ಮೂಲಗಳು ತಿಳಿಸಿವೆ.