ಪರಿಷತ್ ಚುನಾವಣೆ ಅಧಿಸೂಚನೆ: ಯಾದಗಿರಿ ಹೆಸರೇ ಇಲ್ಲ!

| Published : Jun 03 2024, 12:30 AM IST

ಸಾರಾಂಶ

ಪರಿಷತ್‌ ಚುನಾವಣೆಯ ಅಧಿಸೂಚನೆಯಲ್ಲಿ ಯಾದಗಿರಿ ಜಿಲ್ಲೆಯ ಹೆಸರಿರದಿರುವುದು.2ವೈಡಿಆರ್7: ಟಿ. ಎನ್. ಭೀಮುನಾಯಕ, ಕರವೇ ಜಿಲ್ಲಾಧ್ಯಕ್ಷರು ಯಾದಗಿರಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಸರ್ಕಾರ ಹಾಗೂ ಚುನಾವಣೆ ಆಯೋಗದ ಮಟ್ಟಿಗೆ ಯಾದಗಿರಿ ಇನ್ನೂ ಜಿಲ್ಲೆ ಆಗಿಲ್ಲ ಎಂಬುದು ಅತ್ಯಂತ ಸೋಜಿಗದ ಸಂಗತಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ದೂರಿದ್ದಾರೆ.

ಪರಿಷತ್ ಚುನಾವಣೆ ಅಧಿಸೂಚನೆ ಹೊರಡಿಸಿದ ಚುನಾವಣೆ ಆಯೋಗದ ಪಟ್ಟಿಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಮತಕ್ಷೇತ್ರದ ವಿವರ ನೀಡಿದ ಕಾಲಂನಲ್ಲಿ ಇನ್ನು ಯಾದಗಿರಿ ಸೇರ್ಪಡೆಯಾಗಿಲ್ಲದಿರುವುದು ಕಂಡುಬಂದಿದೆ. ಜಿಲ್ಲೆಯಾಗಿ 15 ವರ್ಷ ಕಳೆದರು ಸಹ ಚುನಾವಣೆ ಆಯೋಗ ಪರಿಷತ್ ಚುನಾವಣೆ ಸಂದರ್ಭದಲ್ಲಿ ಇನ್ನು ಕಲಬುರಗಿಯ ವ್ಯಾಪ್ತಿಯಲ್ಲಿ ಯಾದಗಿರಿ ಇದೆ ಎಂಬರ್ಥದಲ್ಲಿ ಹೊರಡಿಸಿದ ಅಧಿಸೂಚನೆಯಲ್ಲಿ ಯಾದಗಿರಿ ಕೈಬಿಟ್ಟಿರುವುದು ಅತ್ಯಂತ ನಾಚಿಕೆಗೇಡು ಸಂಗತಿ ಎಂದರು.

ಸರ್ಕಾರವೇ ಯಾದಗಿರಿ ಜಿಲ್ಲೆಯಾಗಿ ಘೋಷಣೆ ಮಾಡಿದ್ದರೂ ಸಹಿತ ಅಧಿಸೂಚನೆಯಲ್ಲಿ ಜಿಲ್ಲೆಯ ಹೆಸರು ಕಾಣದಿರುವುದಕ್ಕೆ ಜಿಲ್ಲಾ ಚುನಾವಣೆ ಅಧಿಕಾರಿಗಳ ಬೇಜವಾಬ್ದಾರಿ ಕಾರಣವಾಗಿದೆ. ಈ ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಸರ್ಕಾರ ಹಾಗೂ ಆಯೋಗಗಳು ಕಾಲಕಾಲಕ್ಕೆ ಸ್ವಯಂ ಪರಿಷ್ಕರಣೆಗೊಳ್ಳಬೇಕು. ಆದರೆ ಈಶಾನ್ಯ ವಲಯ ಚುನಾವಣೆ ವಿಭಾಗ ಕುಂಭಕರ್ಣ ನಿದ್ರೆಯಲ್ಲಿದೆ ಎನ್ನಲು ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಇಂತಹ ಬೇಜವಬ್ದಾರಿ ಅಧಿಕಾರಿಗಳಿರುವ ಕಾರಣಕ್ಕೆ ಕಲ್ಯಾಣ ಕರ್ನಾಟಕ ಹಿಂದುಳಿಯಲು ಕಾರಣವಾಗಿದೆ. ಈ ಕೂಡಲೇ ಲೋಪ ಸರಿಪಡಿಸಿ ತಪ್ಪಿತಸ್ಥರ ವಿರುದ್ಧ ಶಿಕ್ಷೆಯ ದಂಡಾಸ್ತ್ರ ಪ್ರಯೋಗಿಸಬೇಕು. ಅಂದಾಗ ಮಾತ್ರ ಜಾಗೃತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾ ಚುನಾವಣೆ ವಿಭಾಗದ ಮೇಲೆ ಕ್ರಮ ಜರುಗಿಸುವಂತೆ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ವಿಶ್ವಾರಾಧ್ಯ ದಿಮ್ಮೆ, ಅಬ್ದುಲ್ ಚಿಗಾನೂರ, ಶರಣು ಎಲ್ಹೇರಿ, ವಿಶ್ವಾರಾಜ ಹೊನಿಗೇರಾ ರಮೇಶ ಡಿ. ನಾಯಕ ಆಗ್ರಹಿಸಿದ್ದಾರೆ.