ಪರಿಷತ್‌ ಚುನಾವಣೆ: ಯಾವುದೇ ಲೋಪವಾಗದಂತೆ ಕೆಲಸ ಮಾಡಿ

| Published : May 29 2024, 12:48 AM IST

ಪರಿಷತ್‌ ಚುನಾವಣೆ: ಯಾವುದೇ ಲೋಪವಾಗದಂತೆ ಕೆಲಸ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳನ್ನು ಅಧ್ಯಕ್ಷಾಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಇವರಿಗೆ ಚುನಾವಣೆ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಅನುಭವ ಇರುವುದರಿಂದ ಯಾವುದೇ ಲೋಪಗಳು ನಡೆಯದಂತೆ ಸುಲಲಿತವಾಗಿ ಚುನಾವಣಾ ಕಾರ್ಯ ನಿರ್ವಹಿಸಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೂನ್ 3ರಂದು ನಡೆಯುವ ಚುನಾವಣೆ ಮತದಾನದಲ್ಲಿ ಯಾವುದೇ ಲೋಪವಾಗದಂತೆ ಚುನಾವಣಾಧಿಕಾರಿಗಳು, ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು ಎಂದು ಅಬಕಾರಿ ಆಯುಕ್ತ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ವೀಕ್ಷಕ ಡಾ.ಜೆ.ರವಿಶಂಕರ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ನಡೆದ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ - 2024ರ ಸಂಬಂಧ ಆಯೋಜಿಸಿದ್ದ ಅಧ್ಯಕ್ಷಾಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ತರಬೇತಿಯಲ್ಲಿ ಮಾತನಾಡಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳನ್ನು ಅಧ್ಯಕ್ಷಾಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಇವರಿಗೆ ಚುನಾವಣೆ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಅನುಭವ ಇರುವುದರಿಂದ ಯಾವುದೇ ಲೋಪಗಳು ನಡೆಯದಂತೆ ಸುಲಲಿತವಾಗಿ ಚುನಾವಣಾ ಕಾರ್ಯ ನಿರ್ವಹಿಸಬಹುದು ಎಂದು ಅಭಿಪ್ರಾಯಪಟ್ಟರು.

ಕಳೆದ 17 ವರ್ಷಗಳ ಹಿಂದೆ ಮಂಡ್ಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಇಂದು ಜಿಲ್ಲೆಗೆ ಚುನಾವಣಾ ವೀಕ್ಷಕನಾಗಿ ಬಂದಿರುವುದು ಸಂತೋಷದ ವಿಷಯವಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಚುನಾವಣಾ ಅಧ್ಯಕ್ಷಾಧಿಕಾರಿ, ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣೆಯ ಮಾರ್ಗಸೂಚಿ ತಿಳಿದುಕೊಂಡು ಅದರಂತೆಯೇ ಕಾರ್ಯ ನಿರ್ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಜೂನ್ 3 ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ಪ್ರಕ್ರಿಯೆಯೂ ಜರುಗಲಿದೆ. ಎಲ್ಲ ಚುನಾವಣಾ ಸಿಬ್ಬಂದಿ ನಿಗಧಿ ಪಡಿಸಿದ ಸಮಯಕ್ಕೆ ಮತಗಟ್ಟೆಯಲ್ಲಿ ಹಾಜರಿರಬೇಕು. ಚುನಾವಣಾ ಅಧಿಕಾರಿ ಹಾಗೂ ಸಿಬ್ಬಂದಿ ಮತಗಟ್ಟೆಗೆ ಸಂಬಂಧಿಸಿದ ಎಲ್ಲಾ ಸಾಮಗ್ರಿಗಳನ್ನು ಪಡೆದುಕೊಂಡು ಯಾವುದೇ ಲೋಪದೋಷ ಬಾರದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.

ಮತಗಟ್ಟೆ ಸಂಪೂರ್ಣ ಜವಾಬ್ದಾರಿ ಪ್ರಿಸೈಡಿಂಗ್ ಅಧಿಕಾರಿಗಳ ಮೇಲಿದ್ದು, ಪ್ರಿಸೈಡಿಂಗ್ ಅಧಿಕಾರಿ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಬೇಕು. ಮತದಾನದಲ್ಲಿ ನೋಟಾಗೆ ಅವಕಾಶವಿಲ್ಲ. ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.ಮಂಡ್ಯ ಜಿಲ್ಲೆಯಲ್ಲಿ ಒಟ್ಟು 5403 ಮತದಾರರಿದ್ದು, 3127 ಪುರುಷ ಹಾಗೂ 2276 ಮಹಿಳೆಯರು ಚುನಾವಣೆಯಲ್ಲಿ ಮತ ಚಲಾಯಿಸುವವರು ಶಿಕ್ಷಕರಾಗಿದ್ದಾರೆ. ಎಲ್ಲಾ ಮತದಾರರಿಗೆ ಮತದಾನದ ಬಗ್ಗೆ ಸರಿಯಾದ ಮಾಹಿತಿ ನೀಡಿ ಗೌರವದಿಂದ ವರ್ತಿಸಬೇಕು. ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು.

-ಡಾ.ಜೆ.ರವಿಶಂಕರ್, ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ವೀಕ್ಷಕರು