ಪರಿಷತ್ ಸದಸ್ಯ ಸ್ಥಾನ : ಸ್ಥಳೀಯರಿಗೆ ಅವಕಾಶಕ್ಕೆ ಖರ್ಗೆಗೆ ಮನವಿ

| Published : May 26 2024, 01:34 AM IST

ಸಾರಾಂಶ

ವಿಧಾನ ಪರಿಷತ್ ಸದಸ್ಯರ ಆಯ್ಕೆ ಅವಕಾಶ ನೀಡಬೇಕೆಂದು ಗುರುಮಠಕಲ್ ಕಾಂಗ್ರೆಸ್ ಮುಖಂಡರ ಹಾಗೂ ಪ್ರಮುಖ ಕಾರ್ಯಕರ್ತರ ನಿಯೋಗ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಬರುವ ದಿನಗಳಲ್ಲಿ ವಿಧಾನ ಪರಿಷತ್ ಸದಸ್ಯರ ನೇಮಕ ಪ್ರಕ್ರಿಯೆ ನಡೆಯಲಿದ್ದು, ಪಕ್ಷದ ಹೈಕಮಾಂಡ್ ಪಕ್ಷ ಸಂಘಟನೆ ದೃಷ್ಟಿಯಿಂದ ಗುರುಮಠಕಲ್ ಮತಕ್ಷೇತ್ರದಲ್ಲಿ ಕಳೆದ ನಾಲ್ಕೈದು ದಶಕಗಳ ಕಾಲ ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡಿದ ಕಾರ್ಯಕರ್ತರು ಹಾಗೂ ಮುಖಂಡರಿಗೆ ವಿಧಾನ ಪರಿಷತ್ ಸದಸ್ಯರ ಸ್ಥಾನಕ್ಕೆ ಅವಕಾಶ ನೀಡಬೇಕೆಂದು ಗುರುಮಠಕಲ್ ಕಾಂಗ್ರೆಸ್ ಮುಖಂಡರ ಹಾಗೂ ಪ್ರಮುಖ ಕಾರ್ಯಕರ್ತರ ನಿಯೋಗ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮನವಿ ಮಾಡಿದರು.

1972ರಿಂದ ಗುರುಮಠಕಲ್ ಮತಕ್ಷೇತ್ರದ ಮತದಾರರು ಹಾಗೂ ಕಾರ್ಯಕರ್ತರು ತಮ್ಮನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ತಾವು ಕೂಡ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೀರಿ. ಅಲ್ಲದೇ ಕಲಬುರಗಿ-ಕರ್ನಾಟಕದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದ್ದೀರಿ. 2008ರಲ್ಲಿ ಗುರುಮಠಕಲ್ ಮತಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಬದಲಾವಣೆಯಾದ ಸಮಯದಲ್ಲಿ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ಪ್ರಾಮಾಣಿಕ ಕೆಲಸ ಮಾಡಿದ ಹಲವಾರು ಮುಖಂಡರು, ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಖರ್ಗೆಯವರನ್ನು ಕೋರಿದರು.

ಈ ವೇಳೆ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಗುರುಮಠಕಲ್ ಮತಕ್ಷೇತ್ರದ ಜನರನ್ನು ನಾನೂ ಎಂದು ಮರೆಯುವುದಿಲ್ಲ. ಆದಷ್ಟೂ ಬೇಗನೆ ರಾಜ್ಯ ಮಟ್ಟದ ಕೈ ನಾಯಕರ ಜೊತೆ ಚರ್ಚಿಸಿ, ಅವಕಾಶ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ ಎಂದು ಭರವಸೆ ನೀಡಿದ್ದಾರೆಂದು ಕಾಂಗ್ರೆಸ್‌ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ, ಮುಖಂಡರಾದ ಮಹಿಪಾಲರಡ್ಡಿ ಹತ್ತಿಕುಣಿ, ವಿಶ್ವನಾಥ ನೀಲಹಳ್ಳಿ, ಚಿದಾನಂದಪ್ಪ ಕಾಳೆಬೆಳಗುಂದಿ, ರವೀಂದ್ರ ರಡ್ಡಿ ಗುರುಮಠಕಲ್, ರಘುನಾಥರಡ್ಡಿ ನಜರಾಪೂರ, ಕೃಷ್ಣಾ ಚಪಟ್ಲಾ, ಶರಣೀಕ ಕುಮಾರ ದೋಕಾ, ಶರಣಪ್ಪ ಮಾನೇಗಾರ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಇದ್ದರು.