ನಿರ್ವಹಣೆ ಕೊರತೆಯಿಂದ ಹದಗೆಟ್ಟ ಉದ್ಯಾನ

| Published : Jun 22 2025, 11:47 PM IST

ಸಾರಾಂಶ

ಉದ್ಯಾನದಲ್ಲಿ ಸದ್ಯ ಒಣಗಿರುವ ಹುಲ್ಲುಹಾಸು, ಹಾಳಾದ ಅಲಂಕಾರಿಕ ಸಸ್ಯಗಳು, ಮಡುಗಟ್ಟಿದ ಕೆಸರು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಇತರ ವಸ್ತುಗಳ ತ್ಯಾಜ್ಯ, ಮದ್ಯದ ಖಾಲಿ ಬಾಟಲಿ, ಪ್ಯಾಕೆಟ್‌ಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ತಾಲೂಕಿನ ಏಕೈಕ ಸಾರ್ವಜನಿಕ ಉದ್ಯಾನ ಎಂದು ಪ್ರಖ್ಯಾತಿ ಪಡೆದ ನಿಡಶೇಸಿ ಕೆರೆಯ ದಡದಲ್ಲಿರುವ ಉದ್ಯಾನ ಕಿಡಿಗೇಡಿಗಳ ಹಾವಳಿಗೆ ತತ್ತರಿಸಿ ಹೋಗಿದೆ.

2022ರಲ್ಲಿ ಅಂದಿನ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ತಾಲೂಕಿಗೊಂದು ದೊಡ್ಡ ಉದ್ಯಾನ ನಿರ್ಮಾಣ ಮಾಡುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಂದಾಜು ₹2 ಕೋಟಿ ಅನುದಾನದಲ್ಲಿ ಇದನ್ನು ಅಭಿವೃದ್ಧಿಪಡಿಸಿದರು.

ಉದ್ಯಾನ ನಿರ್ಮಾಣದ ಸಮಯದಲ್ಲಿ ತರಹೇವಾರಿ ಸಸ್ಯ, ಗಿಡ, ಹಚ್ಚಹಸಿರಿನ ಹುಲ್ಲುಹಾಸು, ಹಸು ಕರು, ಎತ್ತು, ರೈತರ ಮೂರ್ತಿಗಳು, ಉದ್ಯಾನ ಸುತ್ತಲೂ ಆವರಣ ಗೋಡೆ, ಜನರು ನಡೆದಾಡಲು ನೆಲಹಾಸು, ಪೆವಿಲಿಯನ್ ಕಟ್ಟಡ, ಕೆರೆಯ ವಿಹಂಗಮ ನೋಟ ಸವಿಯಲು ವೀಕ್ಷಣಾ ಗೋಪುರ ನಿರ್ಮಿಸಲಾಗಿತ್ತು. ವಿವಿಧ ರೀತಿಯ ಅಲಂಕಾರಿಕ ಸಸ್ಯ ನಾಟಿ ಮಾಡಿಸುವ ಮೂಲಕ ಆಕರ್ಷಕವಾಗಿ ಕಾಣುತ್ತಿತ್ತು. ಅದರ ನಿರ್ವಹಣೆ ಹೊಣೆ ಹೊತ್ತಿರುವ ಕೊರಡಕೇರಾ ಗ್ರಾಪಂ ಕೈ ಚೆಲ್ಲಿ ಕುಳಿತುಕೊಂಡ ಪರಿಣಾಮ ಉದ್ಯಾನದ ಚಿತ್ರಣ ಸಂಪೂರ್ಣ ಬದಲಾಗಿ ಹದಗೆಟ್ಟಿದೆ.

ವಾಸ್ತವದ ಸ್ಥಿತಿ:ಉದ್ಯಾನದಲ್ಲಿ ಸದ್ಯ ಒಣಗಿರುವ ಹುಲ್ಲುಹಾಸು, ಹಾಳಾದ ಅಲಂಕಾರಿಕ ಸಸ್ಯಗಳು, ಮಡುಗಟ್ಟಿದ ಕೆಸರು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಇತರ ವಸ್ತುಗಳ ತ್ಯಾಜ್ಯ, ಮದ್ಯದ ಖಾಲಿ ಬಾಟಲಿ, ಪ್ಯಾಕೆಟ್‌ಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ. ಗ್ರಾಮೀಣ ಕೃಷಿ ಪರಂಪರೆ ಬಿಂಬಿಸುವಂತೆ ಪಾರಂಪರಿಕ ರಾಶಿ ಕಣ, ತಿರುಗುವ ಎತ್ತುಗಳು, ರಾಶಿ ಮಾಡುವ ರೈತರು, ಹಸು ಕರು ಹೀಗೆ ವಿಶೇಷವಾಗಿ ಚಿತ್ರಿಸಿ ನಿರ್ಮಿಸಲಾಗಿದ್ದ ಮೂರ್ತಿಗಳು ಸಂಪೂರ್ಣ ಹಾಳಾಗಿವೆ. ಎತ್ತುಗಳ ಬಾಲ, ಕೊಂಬು, ರೈತರ ಮೂರ್ತಿಗಳ ಕೈಗಳನ್ನೆಲ್ಲ ಕಿಡಿಗೇಡಿಗಳು ಮುರಿದು ವಿರೂಪಗೊಳಿಸಿದ್ದು, ನಿರ್ಜನ ಪ್ರದೇಶದಂತಾಗಿ ನಿರ್ಮಾಣವಾಗಿದೆ ಎನ್ನಬಹುದು.

ಅನೈತಿಕ ಚಟುವಟಿಕೆ ತಾಣ: ಪಟ್ಟಣದಿಂದ ಮೂರು ಕಿಲೋ ಮೀಟರ್ ದೂರದಲ್ಲಿರುವ ಈ ಉದ್ಯಾನದಲ್ಲಿ ಪಾದಚಾರಿ ರಸ್ತೆಯುದ್ದಕ್ಕೂ ಗಿಡಗಂಟಿಗಳು ಬೆಳೆದು ನಿಂತಿದ್ದು, ಪ್ರೇಮಿಗಳಿಗೆ ಹೇಳಿ ಮಾಡಿಸಿದ ತಾಣದಂತಾಗಿದೆ. ಯುವಕ-ಯುವತಿಯರು ಇಲ್ಲಿಗೆ ಬರುತ್ತಾರೆ. ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ಇಲ್ಲಿ ಕಂಡುಬರುತ್ತಾರೆ.

ಉದ್ಯಾನ ನಿರ್ವಹಣೆ ನಮ್ಮಿಂದ ಸಾಧ್ಯವಿಲ್ಲ ಎಂದು ಕೊರಡಕೇರಾ ಗ್ರಾಪಂ ಹೇಳಿದೆ, ಆದರೆ ಕುಷ್ಟಗಿ ಪುರಸಭೆ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. ಶಾಸಕ ದೊಡ್ಡನಗೌಡ ಪಾಟೀಲ, ಜಿಲ್ಲಾಧಿಕಾರಿ, ಜಿಪಂ ಸಿಇಒ ಮುತುವರ್ಜಿ ವಹಿಸಿ ಉದ್ಯಾನ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ನಾಗರಿಕರ ಅಭಿಪ್ರಾಯವಾಗಿದೆ.

ಕುಷ್ಟಗಿ ತಾಲೂಕಿನಲ್ಲಿರುವ ಏಕೈಕ ಸಾರ್ವಜನಿಕ ಉದ್ಯಾನ ಇದಾಗಿದ್ದು, ಅಧಿಕಾರಿಗಳು ಅಭಿವೃದ್ಧಿಗೆ ಆಸಕ್ತಿ ವಹಿಸಬೇಕು. ಮುಂದಿನ ದಿನಗಳಲ್ಲಿ ಇದೊಂದು ಪಿಕ್ನಿಕ್ ಸ್ಪಾಟ್ ಆಗಲಿದ್ದು, ಅಭಿವೃದ್ಧಿ ಮಾಡುವ ಮೂಲಕ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕಿದೆ ಎಂದು ಸ್ಥಳೀಯ ನಿವಾಸಿ ಎಚ್‌. ಮಲ್ಲಿಕಾರ್ಜುನ ಕುಷ್ಟಗಿ ತಿಳಿಸಿದ್ದಾರೆ.